ಕಾಡನ್ನು ಕಣ್ಣಾರೆ ಕಾಣುವುದರಿಂದ ಜ್ಞಾನವೃದ್ಧಿ

ಶಾಸಕ ಸಿಮೆಂಟ್ ಮಂಜು ಅಭಿಮತ
ಸಕಲೇಶಪುರ ತಾಲೂಕಿನ ಮುತ್ತೋಡಿ ಅಭಯಾರಣ್ಯ ಪ್ರಕೃತಿ ಶಿಬಿರ ಪ್ರವಾಸಕ್ಕೆ ಶಾಸಕ ಸಿಮೆಂಟ್ ಮಂಜು ಬುಧವಾರ ಚಾಲನೆ ನೀಡಿದರು. ಹೇಮಂತ್, ಪ್ರಸಾದ್ ರಕ್ಷಿದಿ, ಕ್ಯಾಮನಹಳ್ಳಿ ರಾಜ್‌ಕುಮಾರ್, ಪ್ರಕಾಶ್, ಅಗ್ನಿ ಸೋಮಶೇಕರ್, ಆಶೀರ್ವಾದ್ ಇತರರಿದ್ದರು.
ಸಕಲೇಶಪುರ ತಾಲೂಕಿನ ಮುತ್ತೋಡಿ ಅಭಯಾರಣ್ಯ ಪ್ರಕೃತಿ ಶಿಬಿರ ಪ್ರವಾಸಕ್ಕೆ ಶಾಸಕ ಸಿಮೆಂಟ್ ಮಂಜು ಬುಧವಾರ ಚಾಲನೆ ನೀಡಿದರು. ಹೇಮಂತ್, ಪ್ರಸಾದ್ ರಕ್ಷಿದಿ, ಕ್ಯಾಮನಹಳ್ಳಿ ರಾಜ್‌ಕುಮಾರ್, ಪ್ರಕಾಶ್, ಅಗ್ನಿ ಸೋಮಶೇಕರ್, ಆಶೀರ್ವಾದ್ ಇತರರಿದ್ದರು.
Published on: 

ಸಕಲೇಶಪುರ: ಚಿಣ್ಣರ ವನ ದರ್ಶನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಕಾಡಿನ ನೈಜ ಪರಿಸ್ಥಿತಿ, ವನ್ಯಜೀವಿಗಳ ಜೀವನಶೈಲಿ ಹಾಗೂ ಪ್ರಕೃತಿಯ ಮಹತ್ವದ ಬಗ್ಗೆ ನೇರವಾಗಿ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜ್ಞಾನಜ್ಯೋತಿ ಪ್ರೌಢಶಾಲೆ ಆವರಣದಲ್ಲಿ ಅರಣ್ಯ ಇಲಾಖೆಯ ಸಕಲೇಶಪುರ ಉಪ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಚಿಣ್ಣರ ವನ ದರ್ಶನ ಮುತ್ತೋಡಿ ಅಭಯಾರಣ್ಯ ಪ್ರಕೃತಿ ಶಿಬಿರ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಶಾಲೆಯೊಂದಿಗೆ ನನಗೆ ವಿಶೇಷ ಒಡನಾಟವಿದೆ. ನಾನು ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ಸಂದರ್ಭದಲ್ಲಿ ಶಾಲೆಯ ಮೈದಾನದ ಅಭಿವೃದ್ಧಿಗೂ ಅನುದಾನ ನೀಡಿದ್ದೆ ಎಂದು ಸ್ಮರಿಸಿದ ಅವರು, ಸರ್ಕಾರ ಚಿಣ್ಣರ ವನ ದರ್ಶನದಂತಹ ಉತ್ತಮ ಕಾರ್ಯಕ್ರಮ ರೂಪಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಕಾಡಿನಲ್ಲಿರುವ ವನ್ಯಪ್ರಾಣಿಗಳು ಹಾಗೂ ವಿವಿಧ ಪಕ್ಷಿಗಳನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರೆಯುತ್ತದೆ. ಪುಸ್ತಕಗಳಲ್ಲಿ ಓದುವ ವಿಷಯಗಳನ್ನು ಕಾಡಿನಲ್ಲಿಯೇ ಕಣ್ಣಾರೆ ನೋಡುವುದರಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಒಡನಾಟ ಬೆಳೆಸಿಕೊಂಡು ಪರಿಸರ ಮತ್ತು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಮಾತನಾಡಿ, ಚಿಣ್ಣರ ವನ ದರ್ಶನ ಸರ್ಕಾರದ ಉತ್ತಮ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ. ನಾನು ಇಲ್ಲಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೂರನೇ ಚಿಣ್ಣರ ವನ ದರ್ಶನ ಕಾರ್ಯಕ್ರಮ ಇದಾಗಿದೆ ಎಂದರು.

ವಿದ್ಯಾರ್ಥಿಗಳು ಬುಧವಾರ ಸಂಜೆ ಭದ್ರಾ ಅರಣ್ಯ ಪ್ರದೇಶ ಪ್ರವೇಶಿಸಲಿದ್ದು, ಮರುದಿನ ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಸಫಾರಿ ಆಯೋಜಿಸಲಾಗಿದೆ. ಸಫಾರಿ ವೀಕ್ಷಿಸಿ ಅರಣ್ಯ ಪರಿಸರ ಹಾಗೂ ವನ್ಯಜೀವಿಗಳ ಕುರಿತು ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ದಾಖಲಿಸಲು ಪುಸ್ತಕ ನೀಡಲಾಗುತ್ತದೆ. ಉತ್ತಮವಾಗಿ ಬರೆಯುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ಅಲ್ಲದೆ, ಅರಣ್ಯ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್, ಕ್ಯಾಪ್ ಹಾಗೂ ಇತರ ಲೇಖನ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಸಾದ್ ರಕ್ಷಿದಿ, ಬಿಜೆಪಿ ಮುಖಂಡ ಕ್ಯಾಮನಹಳ್ಳಿ ರಾಜ್‌ಕುಮಾರ್, ಶಾಲೆಯ ಪ್ರಾಂಶುಪಾಲ ಪ್ರಕಾಶ್, ಪಕ್ಷದ ಮುಖಂಡರಾದ ಅಗ್ನಿ ಸೋಮಶೇಖರ್, ಆಶೀರ್ವಾದ್, ಆಕಾಶ್, ಕುಮಾರ್, ಹೇಮರಾಜ್, ಕಾಂತ್‌ರಾಜ್, ವಿಶ್ವನಾಥ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.