

ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಆದಿಚುಂಚನಗಿರಿ ಹಾಸನ-ಕೊಡಗು ಕಾರ್ಯದರ್ಶಿಗಳಾದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಧರ್ಮಧ್ವಜ ಅವರೋಹಣ ಮಾಡುವ ಮೂಲಕ ಶ್ರೀ ಬಸವೇಶ್ವರ ಸ್ವಾಮಿಯ ಬೃಹತ್ ಜಾತ್ರಾ ಮಹೋತ್ಸವವನ್ನು ಸಂಪನ್ನಗೊಳಿಸಿದರು.
ಬಳಿಕ ಅವರು ಮಾತನಾಡಿ, ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೃಪಾಶೀರ್ವಾದ ಹಾಗೂ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಭಕ್ತರ ಸಹಕಾರದೊಂದಿಗೆ ಕ್ಷೇತ್ರದಲ್ಲಿ 5 ದಿನಗಳವರೆಗೆ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಶ್ರೀ ಬಸವೇಶ್ವರ ಸ್ವಾಮಿ ದೇಗುಲವನ್ನು ಲೋಕಾರ್ಪಣೆಗೊಳಿಸಿದ್ದು ಇತಿಹಾಸ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಧರ್ಮ ಧ್ವಜ ಅವರೋಹಣಗೊಳಿಸಿ ಜಾತ್ರಾ ಮಹೋತ್ಸವವನ್ನು ಸಂಪನ್ನಗೊಳಿಸುತ್ತಿದ್ದಂತೆಯೇ ಮಳೆ ಸುರಿದಿದ್ದು ಶುಭ ಸೂಚನೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿದು ರೈತರ ಬದುಕು ಹಸನಾಗಲಿದೆ ಎಂದು ಆಶೀರ್ವದಿಸಿದರು.
ಇದಕ್ಕೂ ಮೊದಲು ಶ್ರೀಗಳು ಪುಷ್ಕರಿಣಿಯಲ್ಲಿ ಗಂಗಾಪೂಜೆ ನೆರವೇರಿಸಿದರು. ನಂತರ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಮುತ್ತಿನ ಆರತಿ ಬೆಳಗಿಸಿದರು. ದೇಗುಲದ ಆವರಣದಲ್ಲಿರುವ ಗರುಡಗಂಬದ ಮೇಲಿನ ದೀಪವನ್ನು ಬೆಳಗಿಸಿದರು.
ಬಳಿಕ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ಎತ್ತಿನ ಬಂಡಿ ಉತ್ಸವದೊಂದಿಗೆ ಕರೆತಂದು ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು.
ದೇಗುಲದ ಲೋಕಾರ್ಪಣೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಿವನಂಜೇಗೌಡ, ಎನ್.ಆರ್.ರತ್ನರಾಜ್, ಗುಡಿಗೌಡ ಪ್ರಕಾಶ್, ಪ್ರಮುಖರಾದ ಗಣೇಶ್ ಗೌಡ, ಜವರೇಗೌಡ, ಹೊನ್ನೇಗೌಡ, ಶ್ರೀಕಂಠೇಗೌಡ, ಶ್ರೀಕಂಠು, ಬೋರೇಗೌಡ, ಅರುಣ್ ಹಾಗೂ ಭಕ್ತರು ಪಾಲ್ಗೊಂಡಿದ್ದರು.