

ಬೇಲೂರು: ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ಕ್ಷೇತ್ರದಲ್ಲಿ ಪಂಚ ಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ, ಇಷ್ಟಲಿಂಗ ಮಹಾಪೂಜೆ, ಧರ್ಮಜಾಗೃತಿ ಸಮಾವೇಶ, ಶಿವದೀಕ್ಷಾ, ಶ್ರೀ ವೀರಭದ್ರೇಶ್ವರರ ಜಯಂತ್ಯುತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ವೇದಿಕೆ ನಿರ್ಮಾಣಕ್ಕೆ ಶಾಸಕ ಎಚ್.ಕೆ.ಸುರೇಶ್ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಸೆ.30ರಂದು ಮಧ್ಯಾಹ್ನ 2 ಗಂಟೆಗೆ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದ್ದು, ಸಂಜೆ ಧರ್ಮಜಾಗೃತಿ ಸಭೆ ಹಾಗೂ ವಿಶೇಷ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು, ಅರ್ಚಕರು, ವೈದಿಕ ವೃಂದ ಹಾಗೂ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಪೂರ್ವಭಾವಿಯಾಗಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಮಾಹಿತಿ ನೀಡಿದರು.
ಉಜ್ಜಯಿನಿ ಶ್ರೀಗಳು ಸಮಾಜಕ್ಕೆ ಧರ್ಮ, ಸಂಸ್ಕಾರ ಹಾಗೂ ಸನ್ಮಾರ್ಗವನ್ನು ತೋರಿಸುವ ಮಹಾನ್ ಚೇತನರು. ಜಗದ್ಗುರುಗಳು ಬೇಲೂರಿಗೆ ಆಗಮಿಸುತ್ತಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ. ಚನ್ನಕೇಶವಸ್ವಾಮಿಯ ಸ್ಮರಣೆಯೊಂದಿಗೆ ನಡೆಯಲಿರುವ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮಜಾಗೃತಿ ಸಭೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಸಮಾಜದಲ್ಲಿ ಧಾರ್ಮಿಕ ಹಾಗೂ ಸೌಹಾರ್ದ ಭಾವನೆ ಬೆಳೆಸುವಂತಹ ಈ ಕಾರ್ಯಕ್ರಮದಲ್ಲಿ ಎಲ್ಲ ಸಮಾಜದವರು ಸಂತೋಷದಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಬೇಲೂರಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಮತ್ತಷ್ಟು ಮೆರುಗು ತರುವ ರೀತಿಯಲ್ಲಿ ಸಹಕಾರ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಭಕ್ತರು ಹಾಗೂ ವಿವಿಧ ಸಮಾಜಗಳ ಮುಖಂಡರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಮುಖಂಡ ರೇಣುಕಯ್ಯ ಮಾತನಾಡಿ, ಕಾರ್ಯಕ್ರಮದ ಸಿದ್ಧತೆಗೆ ಸಹಕರಿಸಿದ ಶಾಸಕ ಎಚ್.ಕೆ.ಸುರೇಶ್ ಹಾಗೂ ಸ್ಥಳೀಯ ಮುಖಂಡರಿಗೆ ಸಮಾಜ ಹಾಗೂ ಸಾರ್ವಜನಿಕರ ಪರವಾಗಿ ಧನ್ಯವಾದ. ಬೃಹತ್ ಸಭಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಎಲ್ಲರೂ ಸಹಕಾರ ನೀಡಬೇಕು ಎಂದರು.