ಹೋಬಳಿಯ ಬ್ಯಾಡರಹಳ್ಳಿ ಗ್ರಾಮದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಆಯೋಜಿಸಿದ್ದ ಹಿರೀಸಾವೆ ಕ್ಲಸ್ಟರ್ ಕಲಿಕಾ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಡಿಪಿ ಸದಸ್ಯ ಬಿಆರ್ ಯೋಗೇಶ್, ಬಾಳಗಂಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್, ಬಿಆರ್‌ಸಿ ಅನಿಲ್, ಶಿಕ್ಷಣ ಸಂಯೋಜಕ ಶ್ರೀನಿವಾಸ್, ತಾಲೂಕು ನಿರ್ದೇಶಕ ಎನ್. ಮೂರ್ತಿ ಧರ್ಮಪಾಲ್ ಹಿರಿಯಣ್ಣ, ಎಸ್‌ಡಿಎಮ್‌ಸಿ ಅಧ್ಯಕ್ಷ ಸತೀಶ್ ಇತರರು ಇದ್ದರು.
ಹಿರೀಸಾವೆ: ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಗ್ರಾಮಸ್ಥರು ಮುಂದಾಗಬೇಕು ಎಂದು ಕೆಡಿಪಿ ಸದಸ್ಯ ಬ್ಯಾಡರಹಳ್ಳಿ ಯೋಗೇಶ್ ಹೇಳಿದರು.
ಹೋಬಳಿಯ ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಲಕರು ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಹೊರಬಂದಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲಿವೆ ಎಂದರು.
ಸರ್ಕಾರಿ ಶಾಲೆಗಳು ಉಚಿತ ಶಿಕ್ಷಣ ನೀಡುವ ಮೂಲಕ ಬಡ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡಲಿವೆ. ಸರ್ಕಾರಿ ಶಾಲೆಯಲ್ಲಿ ಓದಿದ ಅದೆಷ್ಟೋ ಮಹನೀಯರು ಕೃಷಿ, ವಿಜ್ಞಾನ, ಶಿಕ್ಷಣ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.
ಗ್ರಾಮದ ಶಾಲಾ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು ಕಿಟಕಿ, ಬಾಗಿಲು ಹಾಗೂ ಛಾವಣಿಯ ಮರಮುಟ್ಟುಗಳು ಗೆದ್ದಲು ಹಿಡಿದಿವೆ. ಇಂತಹ ಅಪಾಯದ ಕೆಳಗೆ ಕುಳಿತು ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇದೆ. ಶಾಲಾ ಕೊಠಡಿ ದುರಸ್ತಿ ಅಗತ್ಯವಿದ್ದು, ಅನುದಾನ ಕಲ್ಪಿಸುವಂತೆ ಕೆಡಿಪಿ ಸಭೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅನಿಲ್ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿ ಸಲುವಾಗಿ ಸರ್ಕಾರವು ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಯಾವುದೇ ಒಂದು ಸಣ್ಣ ಅವಕಾಶ ಸಿಕ್ಕರೆ ಸಾಕು ಸದ್ಬಳಕೆ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದರು.
ದಿನದಿಂದ ದಿನಕ್ಕೆ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿರುವ ಪರಿಣಾಮ ಗ್ರಾಮೀಣ ಭಾಗದ ಸಾಕಷ್ಟು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಒಮ್ಮೆ ಶಾಲೆ ಬಾಗಿಲು ಮುಚ್ಚಿದರೆ ಮತ್ತೊಮ್ಮೆ ತೆರೆಯಲು ಸಾಧ್ಯವಿಲ್ಲ. ಹೊಸದಾಗಿ ಶಾಲೆ ತೆರೆಯಬೇಕೆಂದರೆ 25 ವಿದ್ಯಾರ್ಥಿಗಳ ಹಾಜರಾತಿ ಬೇಕಾಗಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ಮಾತನಾಡಿ, ಉನ್ನತ ಹುದ್ದೆಗಳನ್ನು ಹರಸಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬಾರದು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣವಂತರಾಗಿ ಬೆಳೆಸುವುದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ಖಾಸಗಿ ಶಾಲೆಗಳು ಒಳ್ಳೆಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡುತ್ತಿವೆ ವಿನಾ ಕಡಿಮೆ ಅಂಕ ಗಳಿಸಿದ ಮಕ್ಕಳಿಗೆ ಆದ್ಯತೆ ನೀಡುವುದಿಲ್ಲ. ಹೆತ್ತವರನ್ನು ಸಾಕಲು, ಗುರು ಹಿರಿಯರಿಗೆ ಗೌರವ ನೀಡಲು ಹಾಗೂ ಸಮಾಜದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶಿಕ್ಷಣವೆ ಮುಖ್ಯವಲ್ಲ ಸಂಸ್ಕಾರ ಬೇಕು ಎಂದು ಕಿವಿಮಾತು ಹೇಳಿದರು.
ಕ್ಲಸ್ಟರ್ ಮಟ್ಟದ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಪ್ರದರ್ಶನ ನೀಡಲಾಯಿತು. ತೀರ್ಪುಗಾರರು ಶುದ್ಧತೆ ಹಾಗೂ ರುಚಿ ಪರಿಗಣಿಸಿ ಫಲಿತಾಂಶ ನೀಡಿದರು. ಕೊತ್ತನಹಳ್ಳಿ ಶಾಲೆ ಪ್ರಥಮ, ಬ್ಯಾಡರಹಳ್ಳಿ ಶಾಲೆ ದ್ವಿತೀಯ ಹಾಗೂ ಪಿಎಂ ಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನಕ್ಕೆ ಭಾಜನವಾಯಿತು.
ಶಿಕ್ಷಣ ಸಂಯೋಜಕ ಶ್ರೀನಿವಾಸ್, ಸಿಆರ್ ಪಿ ಧರ್ಮಪಾಲ್, ಎಸ್ಡಿಎಂಸಿ ಅಧ್ಯಕ್ಷ ಸತೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೆಟ್ಟೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕ ಹಿರಿಯಣ್ಣ. ತಾಲೂಕು ನಿರ್ದೇಶಕ ಎಚ್.ಎನ್.ಮೂರ್ತಿ, ಮುಖ್ಯಶಿಕ್ಷಕಿ ದ್ರಾಕ್ಷಾಹಿಣಿ, ಪಾಲಕರು ಇದ್ದರು.