ಸಮಾಜೋನ್ನತಿಯಲ್ಲಿ ದಾಸವರೇಣ್ಯರ ಕೊಡುಗೆ ಅಪಾರ

Sammelana-1
Published on

ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀ ಆಶೀರ್ವಚನ

ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

ವಿಜಯವಾಣಿ ಸುದ್ದಿಜಾಲ ಉಡುಪಿ

ದಾಸ ಸಾಹಿತ್ಯ ಹಾಗೂ ಶರಣ ಸಾಹಿತ್ಯವು ಒಂದೇ ಸ್ಫೂರ್ತಿ ಹೊಂದಿದ ಎರಡು ಸಾಹಿತ್ಯ ಪ್ರಕಾರವಾಗಿದೆ. ದಾಸ ಸಾಹಿತ್ಯವು ಭಗವಂತನ ದಾಸ್ಯ ಸ್ವೀಕರಿಸುವಂತೆ ಹಾಗೂ ಶರಣ ಸಾಹಿತ್ಯವು ಶರಣು ಶರಣಾರ್ಥಿಗಳಾಗಿ ವಿನಯದ ಜೀವನ ನಡೆಸಲು ತಿಳಿಸುತ್ತದೆ. ಸಮಾಜೋನ್ನತಿಯಲ್ಲಿ ಈ ಎರಡೂ ಸಾಹಿತ್ಯಗಳ ದಾಸವರೇಣ್ಯರ ಕೊಡುಗೆ ಅಪಾರವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

Sammelana-2
ಉಡುಪಿಯಲ್ಲಿ ಆಯೋಜಿಸಿದ್ದ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿದರು. ಶಿವರುದ್ರ ಶ್ರೀ, ಸುಶ್ರೀಂದ್ರ ಶ್ರೀ, ಸಿದ್ಧಲಿಂಗೇಶ್ವರ ಶ್ರೀ, ಡಾ. ಎ.ಬಿ. ಶಾಮಾಚಾರ್ಯ, ಡಾ. ವೇಣುಗೋಪಾಲ, ಪಾಂಡುರಂಗ ರಾವ್​ ಕಂಪ್ಲಿ ಇತರರಿದ್ದರು.

ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಮೂರು ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸೇವಾ ಮನೋಭಾವ

ಯಾವುದೇ ಸಮಾಜದ ಸುಸ್ಥಿತಿಯು ಸೇವಾ ಮನೋಭಾವದಲ್ಲಿರುತ್ತದೆ. ಸನಾತನ ಧರ್ಮದ ಉದ್ದೇಶವೂ ಸಹ ಸೇವಾ ಮನೋಭಾವದ ಅಡಿಪಾಯವೇ ಆಗಿದೆ. ನೈತಿಕ ಮೂಲವೇ ಸೇವಾ ಮನೋಭಾವನೆಯಾಗಿದೆ ಎಂದು ಪುತ್ತಿಗೆಶ್ರೀ ಅರುಹಿದರು.

ಧರ್ಮ ರಕ್ಷಿಸಿದ ದಾಸರು

Sammelana-3
ಬೆಂಗಳೂರು ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಶ್ರೀಗಳು ದಿಕ್ಸೂಚಿ ಭಾಷಣ ಮಾಡಿದರು.

ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಶ್ರೀಗಳು, ಪುರಂದರ, ಕನಕ, ವಿಜಯ, ವಿಠ್ಠಲ ಹೀಗೆ ಅನೇಕ ದಾಸರ ಬಳಗವೇ ಇದೆ. ಎಲ್ಲ ಕಡೆ ವಾಸಿಸುತ್ತಿದ್ದ ಅವರು ಜನರಿಗಾಗುತ್ತಿದ್ದ ಮೋಸ, ಮತಾಂತರ ಮಾಡುವ ಷಡ್ಯಂತ್ರ ತಡೆದರು. ಆದರೆ, ಈ ಕುರಿತು ದಾಖಲೆ ಇಟ್ಟಿಲ್ಲ. ಹಿಂದು ಧರ್ಮ ರಕ್ಷಣೆಯಲ್ಲಿ ದಾಸರ ತ್ಯಾಗ, ಬಲಿದಾನದ ಹೋರಾಟ ಕರ್ನಾಟಕದಲ್ಲಲ್ಲದೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಕೋಲಾರದ ಫಾದರ್​ ಅಂತೋನಿ ಎಂಬವರು ಬರೆದ ಪುಸ್ತಕದಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರದ ಪ್ರಕ್ರಿಯೆಯನ್ನು ದಾಸರು ಹೇಗೆ ತಡೆದರು ಎಂಬುದನ್ನು ವರ್ಣಿಸಿದ್ದಾರೆ. ವೇದಗಳ ಜ್ಞಾನದಿಂದ ವಂಚಿತರಾದ ಜನಸಾಮಾನ್ಯರ ಮನದಂಗಳದಲ್ಲಿ ಭಾಗವತದ ದೀಪ ಹಚ್ಚಿದವರು ದಾಸವರೇಣ್ಯರು. ದಾಸ ಸಾಹಿತ್ಯವೆಂದರೆ ಅದು ಅಮೃತ. ಗೊತ್ತಿದ್ದು, ಗೊತ್ತಿಲ್ಲದೆಯೂ ಅದನ್ನು ಕುಡಿದರೆ ಚಿರಂಜೀವಿಗಳಾಗುತ್ತಾರೆ. ಜಗತ್ತಿನ ಎಲ್ಲ ಸಮಸ್ಯೆ ಬಗೆಹರಿಸಿ, ಎಲ್ಲರಲ್ಲೂ ಸಹೋದರ ಭಾವ ಮೂಡಿಸುವ ಏಕೈಕ ದಿವ್ಯೌಷಧ ದಾಸ ಸಾಹಿತ್ಯ. ನಮ್ಮ ಮುಂದಿನ ಪೀಳಿಗೆಗಾಗಿ, ಮತಾಂತರ ಷಡ್ಯಂತ್ರ ತಡೆಯುವುದಕ್ಕೋಸ್ಕರವಾಗಿ ದಾಸ ಸಾಹಿತ್ಯ ರಕ್ಷಿಸಲೇಬೇಕಾದ ಅಗತ್ಯತೆ ಇದೆ ಎಂದರು.

ಕೃತಿ ಬಿಡುಗಡೆ

ಅನೇಕರ ಪ್ರಬಂಧಗಳನ್ನು ಒಳಗೊಂಡ ವಿಜಯ ವಿಠ್ಠಲ ಕೃತಿ, ವಿಜಯದಾಸರ ಕುರಿತ ವಿಜಯ ಚಿಂತನಾ ಮೋದ ಕೃತಿ ಹಾಗೂ ಶ್ರೀ ಸರ್ವಜ್ಞ ಪತ್ರಿಕೆಯನ್ನು ಶ್ರೀಗಳು ಬಿಡುಗಡೆ ಮಾಡಿದರು. ವಿಜಯದಾಸರ ಮೂಲ ಸನ್ನಿಧಾನದಿಂದ ಆಗಮಿಸಿದ್ದ ಪ್ರಸಾದ ಹಾಗೂ ಶೇಷವಸ್ತ್ರವನ್ನು ಪರ್ಯಾಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸ್ವೀಕರಿಸಿದರು.

ದಾಸ ಸಾಹಿತ್ಯದ ಸಂಶೋಧಕ ಡಾ. ಎ.ಬಿ. ಶಾಮಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹೃದ್ರೋಗ ತಜ್ಞ ಡಾ. ವೇಣುಗೋಪಾಲ, ದಾಸ ಸೌರಭ ಸಾಹಿತ್ಯ ಟ್ರಸ್ಟ್​ನ ಪಾಂಡುರಂಗ ರಾವ್​ ಕಂಪ್ಲಿ, ಮಠದ ದಿವಾನ ನಾಗರಾಜ ಆಚಾರ್ಯ, ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಇತರರು ಉಪಸ್ಥಿತರಿದ್ದರು.

ಯುವ ಸಾಹಿತಿ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಸ್ವಾಗತಿಸಿದರು. ಶ್ರೀ ಶ್ರೀನಿವಾಸ ಉತ್ಸವ ಬಳಗದ ಮುಖ್ಯಸ್ಥ ವಾದಿರಾಜ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ದಾಸವಾಣಿ, ಗೋಷ್ಠಿ

ಸಭಾ ಕಾರ್ಯಕ್ರಮದ ಬಳಿಕ ಪಂ. ಡಾ.ಮುದ್ದು ಮೋಹನ್​ (ನಿವೃತ್ತ ಐಎಎಸ್​) ತಂಡದಿಂದ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಡಾ. ವಾರುಣಿ ಜಯತೀರ್ಥಾಚಾರ್ಯ ಕಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ 15ಕ್ಕೂ ಅಧಿಕ ವಿದ್ವಾಂಸರು ಪ್ರಬಂಧ ಮಂಡಿಸಿದರು.

ಸರ್ಕಾರ ನೈತಿಕ ಶಿಕ್ಷಣದ ಪಠ್ಯಕ್ರಮ ಅಳವಡಿಸಲಿ

ಅಮೆರಿಕದಂತಹ ದೇಶದಲ್ಲಿ ಮಕ್ಕಳಿಗೆ ವಿನಯದ ಪಾಠದ ಬದಲು ಅಹಂಕಾರ (ಇಗೋ) ಕಲಿಸಿಕೊಡಲಾಗುತ್ತದೆ. ಹೆತ್ತವರಿಗೆ ಮಕ್ಕಳು ಗೌರವ ಕೊಡುವುದಿಲ್ಲ. ಶಾಲೆಯ ಮಕ್ಕಳ ಕುತ್ತಿಗೆಯಲ್ಲಿ 911 ನಂಬರ್​ನ ಸಹಾಯವಾಣಿಯ ಕೊರಳಪಟ್ಟಿ ಇರುತ್ತದೆ. ಪಾಲಕರು ಬೈದರೆ ಅಥವಾ ಹೊಡೆದರೆ ಅವರು ಆ ನಂಬರ್​ಗೆ ಕರೆ ಮಾಡಿ ಹೆತ್ತವರನ್ನೇ ಅರೆಸ್ಟ್​ ಮಾಡಿಸುವ ವ್ಯವಸ್ಥೆ ಇದೆ. ಅಲ್ಲಿನ ಕುಟುಂಬಗಳಲ್ಲಿ ಮನ:ಶಾಂತಿ ಇಲ್ಲ. ಎಲ್ಲೆಡೆ ಅಶಾಂತಿ ತುಳುಕಿ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಆದರೆ, ಭಾರತದಲ್ಲಿ ದಾಸ ಸಾಹಿತ್ಯ, ಶರಣ ಸಾಹಿತ್ಯಗಳು ನಮ್ಮ ಬದುಕಿಗೆ ಒಳ್ಳೆಯ ನೆಲಗಟ್ಟು ನೀಡಿದೆ. ತಂದೆ-ತಾಯಿ, ಅತಿಥಿಗಳನ್ನು ಗೌರವಿಸುವುದನ್ನು ಕಲಿಸುತ್ತದೆ. ಭಾರತದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಇದ್ದು, ದುರಾದೃಷ್ಟವಶಾತ್​ ಇದು ಕ್ಷೀಣಿಸುತ್ತಿದೆ. ಹೀಗಾಗಿ ಸರ್ಕಾರಗಳು ಶಾಲಾ-ಕಾಲೇಜುಗಳಲ್ಲಿ ದಾಸ-ಶರಣ ಸಾಹಿತ್ಯ, ವೇದಾಂತ ಹಾಗೂ ಗ್ರಂಥಗಳ ಸಂದೇಶ ಒಳಗೊಂಡ ನೈತಿಕ ಶಿಕ್ಷಣ ಬೋಧಿಸುವಂತಹ ಪಠ್ಯಕ್ರಮ ಅಳವಡಿಸಬೇಕು ಎಂದು ಸುಗುಣೇಂದ್ರ ಶ್ರೀ ಆಗ್ರಹಿಸಿದರು.

ಕರ್ನಾಟಕದಲ್ಲಿರುವ ಎಲ್ಲ ಹರಿದಾಸ ಸಾಹಿತ್ಯ ಸಂಘಗಳ ಒಕ್ಕೂಟ ಒಂದುಗೂಡಿಸಬೇಕು. ಭಾರತದಲ್ಲಿರುವಂತಹ ಎಲ್ಲ ಸಂತ ಜಿಜ್ಞಾಸುಗಳ ಒಕ್ಕೂಟ ರಚನೆಯಾಗಬೇಕು. ತನ್ಮೂಲಕ ಜಗತ್ತಿಗೆ ದಾಸ ಸಾಹಿತ್ಯದ ವಿಶ್ವರೂಪ ತೋರ್ಪಡಿಸಬೇಕು. ಇದು ಈ ಯುಗದ ಅವಶ್ಯಕತೆ. | ಸಿದ್ಧಲಿಂಗೇಶ್ವರ ಸ್ವಾಮೀಜಿ. ಜಂಗಮ ಮಠ, ನಾಗಸಂದ್ರ  ಇಂದಿನ ದಿನವೇ ಶುಭದಿನವು ಎಂಬ ಪುರಂದರ ದಾಸರ ಹಾಡಿನಂತೆ ಪ್ರತಿದಿನವೂ ಶುಭದಿನದ ದ್ಯೋತಕವೇ ಆಗಿದೆ. ದೇಶದಲ್ಲಿ ಎಷ್ಟೋ ಬಗೆಯ ಪಂಥಗಳಿದ್ದು ಅವುಗಳಲ್ಲಿ ದಾಸ ಪಂಥವೇ ಶ್ರೇಷ್ಠವಾಗಿದೆ. ಇದಕ್ಕೆ ಸೈದ್ಧಾಂತಿಕ ಹಿನ್ನೆಲೆಯೂ ಇದೆ. ಜನರ ನಡೆ-ನುಡಿಗಳು ಹೇಗಿರಬೇಕೆಂದು ತಿಳಿಸಿದ್ದೇ ದಾಸ ಸಾಹಿತ್ಯ. ಮನುಕುಲಕ್ಕೆ ಇದೊಂದು ದೊಡ್ಡ ಕೊಡುಗೆ. ಇಂದಿಗೂ ದಾಸ ಸಾಹಿತ್ಯ ಜೀವಂತಿಕೆ ಹೊಂದಿರಲು ಶ್ರೀ ವಿಜಯದಾಸರ ಕೊಡುಗೆ ಅನನ್ಯ. ದಾಸರ ಹಾಡಿನ ಮೂಲಕ ದೇವರ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯವಿದೆ. | ಡಾ. ಎ.ಬಿ. ಶಾಮಾಚಾರ್ಯ. ದಾಸ ಸಾಹಿತ್ಯ ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net