

ವಿಜಯವಾಣಿ ಸುದ್ದಿಜಾಲ ಉಡುಪಿ
ದೀಪಾವಳಿ ಹಾಗೂ ಕಾರ್ತಿಕ ಮಾಸದ ಸಂದರ್ಭದಲ್ಲಿ ದೀಪೋತ್ಸವ ಆಚರಿಸುವಂತೆ ಕೃಷ್ಣನ ಸನ್ನಿಧಿಯಲ್ಲಿ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ ಹಾಗೂ ದಾಸ ಸಾಹಿತ್ಯದ ಮೂಲಕ ಜ್ಞಾನ ದೀಪೋತ್ಸವವೇ ನಡೆದಿದೆ. ಜಗತ್ತಿನಲ್ಲಿ ವ್ಯಾಸ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಸೂರ್ಯ-ಚಂದ್ರರ ಹಾಗೆ ಜನರಿಗೆ ಆಂತರಿಕ ಜ್ಞಾನದ ಬೆಳಕು ನೀಡಲಿ. ಎಲ್ಲರ ಜೀವನ ಸಾರ್ಥಕ ಮಾಡಲಿ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಶ್ರಿ ವಾದಿರಾಜ ಸಂಶೋಧನಾ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಮೂರು ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ದಾಸ ಸಾಹಿತ್ಯದ ಹಿರಿಯ ಸಂಶೋಧಕ ಡಾ. ಎ.ಬಿ. ಶಾಮಾಚಾರ್ಯ ಅವರಿಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ' ಹಾಗೂ ಬೆಂಗಳೂರಿನ ಹಿರಿಯ ವೈದ್ಯ, ಗಾಯನ ಸಮಾಜದ ಅಧ್ಯಕ್ಷ ಡಾ. ಎಂಆರ್ವಿ ಪ್ರಸಾದ್ ಅವರಿಗೆ ಮಧ್ವ ಪುರಂದರ ಪ್ರಶಸ್ತಿಯನ್ನು ಪೇಜಾವರ ವಿಶ್ವಪ್ರಸನ್ನ ತೀರ್ಥ ಹಾಗೂ ಪುತ್ತಿಗೆ ಶ್ರೀ ಪ್ರದಾನ ಮಾಡಿದರು. ಮಹಿತೋಷ್ ಆಚಾರ್ಯ ಹಾಗೂ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸನ್ಮಾನ ಪತ್ರ ವಾಚಿಸಿದರು.
ಸಮಾರೋಪ ಭಾಷಣ ಮಾಡಿದ ಮೈಸೂರು ವಿವಿಯ ಪ್ರಸಾರಂಗದ ಸಹನಿರ್ದೇಶಕ ಡಾ. ಬಿ.ಎಸ್. ಅನಿಲಕುಮಾರ್ ಬೊಮ್ಮಘಟ್ಟ ಮಾತನಾಡಿ, ಹರಿದಾಸರನ್ನು ಈ ಜಗತ್ತು ಕಂಡಿದ್ದು ಎರಡು ರೀತಿಯಿಂದ. ಅವರು ಆಡಿದ ಮಾತುಗಳನ್ನು (ಸಾಹಿತ್ಯದ) ಕೇಳುವ ಮೂಲಕ ಹಾಗೂ ಅವರು ನಡೆದುಕೊಂಡ ರೀತಿಯ ಮೂಲಕ. ಎಷ್ಟೋಬಾರಿ ನಮ್ಮ ಮಾತಿಗೂ ಕೃತಿಗೂ ವ್ಯತ್ಯಾಸ ಇರುತ್ತದೆ. ಆದರೆ, ದಾಸರು ತಾವು ಆಡಿದ ಮಾತಿನಂತೆ ನಡೆದು ತೋರಿಸಿದವರು ಎಂದರು.
ಹುಬ್ಬಳ್ಳಿಯ ಭಾರತ ವಿಕಾಸ್ ಸಂಗಮದ ಮಹಿಳಾ ವಿಭಾಗದ ಮುಖ್ಯಸ್ಥೆ ರೂಪಾ ಧವಳಗಿ, ಬೆಂಗಳೂರಿನ ಹರಿದಾಸ ಸಂಪದ ಟ್ರಸ್ಟ್ನ ಕಾರ್ಯದರ್ಶಿ ಮಧುಸೂದನ್ ಉಪಸ್ಥಿತರಿದ್ದರು. ಪುತ್ತಿಗೆ ಮಠದ ಸುಗುಣಮಾಲಾ ಆಂಗ್ಲ ಪತ್ರಿಕೆಯ ಸಂಪಾದಕ ರಘೂತ್ತಮ ಆಚಾರ್ಯ ಪ್ರಾರ್ಥಿಸಿದರು. ಯುವ ಸಾಹಿತಿ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಪುರಂದರ ದಾಸರ ದಿನಚರಿ ಆಧರಿಸಿ ಕರಿಗಿರಿ ಫಿಲಮ್ಸ್ ತಯಾರಿಸಿರುವ "ಹರಿದಾಸ ದಿನಚರಿ' ಚಿತ್ರದ ಧ್ವನಿ ಸುರಳಿ ಬಿಡುಗಡೆ ಮಾಡಲಾಯಿತು. ಚಿತ್ರದ ನಿರ್ದೇಶಕ ಗಿರೀಶ್ ನಾಗರಾಜ್ ಮಾತನಾಡಿ, ಚಿತ್ರ ನಿರ್ಮಾಣದ ಉದ್ದೇಶ ತಿಳಿಸಿದರು. ಸಂಗೀತ ವಿದ್ವಾಂಸ ಡಾ. ವಿದ್ಯಾಭೂಷಣ ಪುರಂದರರಾಗಿ ನಟಿಸಿದ್ದು, ಚಿತ್ರದ ಸೆನ್ಸಾರ್ ಕೂಡ ಆಗಿದೆ. ಡಿ.5ರಂದು ಚಿತ್ರ ಬಿಡುಗಡೆ ಆಗಲಿದೆ ಎಂದರು. ಪುತ್ತಿಗೆ ಶ್ರೀ ಮಾತನಾಡಿ, ವಿಜಯದಾಸರ ಆರಾಧನೆಯ ಪರ್ವದಲ್ಲಿ ಕೃಷ್ಣನ ಸನ್ನಿಧಿಯಲ್ಲಿ ದಾಸರ ವಿಜಯದ ವೈಭವ ಕಾಣುತ್ತಿದ್ದೇವೆ. ನಿನ್ನೆ ವಿಜಯದಾಸರ ಕುರಿತಾದ "ಸಂಕೀರ್ತನ' ಚಿತ್ರದ ತುಣುಕು ಬಿಡುಗಡೆ ಮಾಡಲಾಗಿದೆ. ಇಂದು ಪುರಂದರ ದಾಸರ ಕುರಿತ "ಹರಿದಾಸ ದಿನಚರಿ' ಚಿತ್ರದ ಧ್ವನಿ ಸುರಳಿ ಬಿಡುಗಡೆ ಮಾಡಲಾಗಿದೆ. ಈ ಎರಡೂ ಚಿತ್ರ ಎಲ್ಲೆಡೆ ಹಿಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹರಿದಾಸರ ವೈಭವ ಮತ್ತೊಮ್ಮೆ ಜಗದಗಲ ವ್ಯಾಪಿಸಲಿ ಎಂದು ಹಾರೈಸಿದರು. ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ದಾಸರು ತಮ್ಮ ಜೀವನೋದ್ಧಾರಕ್ಕಾಗಿ ಬದುಕು ಮೀಸಲಿಟ್ಟಿರಲಿಲ್ಲ. ಸಮಾಜ ತಿದ್ದುವುದಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದರು. ಆ ಸಂಗತಿ ಜನಮಾನಸಕ್ಕೆ ಮುಟ್ಟುವಲ್ಲಿ ಈ ಚಿತ್ರ ಸಮಾಜಮುಖಿಯಾಗಿಯೂ ಕೆಲಸ ಮಾಡಲಿದೆ ಎಂಬ ವಿಶ್ವಾಸವಿದೆ. ಇದಕ್ಕೆ ಕೃಷ್ಣನ ಅನುಗ್ರಹ ಲಭಿಸಲಿ ಎಂದರು.
ದಾಸವರೇಣ್ಯರು ಸಮಾಜಕ್ಕೆ ಕೊಟ್ಟ ಕೊಡುಗೆ, ಉಪಕಾರವನ್ನು ಯಾರೂ ವಾಪಸ್ ನೀಡಲು ಸಾಧ್ಯವಿಲ್ಲ. ಅವರ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಕೃತಿಗಳನ್ನು ಹಾಡುವ ಮೂಲಕ, ಅದರ ಮೌಲ್ಯ ಅಳವಡಿಸಿಕೊಳ್ಳುವ ಮೂಲಕ ಅವರ ಉಪಕಾರ ಸ್ಮರಿಸಬಹುದು. ಹರಿದಾಸರ ಕೃತಿಗಳು ಎಲ್ಲ ಸ್ವೀಟ್ಗಳಿಗಿಂತಲೂ ಹೆಚ್ಚಿನ ರುಚಿಯುಳ್ಳದ್ದು. | ಡಾ. ಎಂಆರ್ವಿ ಪ್ರಸಾದ್. ಹಿರಿಯ ವೈದ್ಯ, ಬೆಂಗಳೂರು. ಚಿನ್ನದ ರಥದಲ್ಲಿ ವಿಯದಾಸರ ಭಾವಚಿತ್ರ ಮೆರವಣಿಗೆ
ವಿಜಯದಾಸರ ಆರಾಧನೆಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಹಾಗೂ ಶ್ರೀನಿವಾಸ ಉತ್ಸವ ಬಳಗ ಬೆಂಗಳೂರು ನೇತೃತ್ವದಲ್ಲಿ ಸೋಮವಾರ ವೈಭವದಿಂದ ಶ್ರೀವಿಜಯದಾಸರ ಆರಾಧನೆ ನಡೆಯಿತು. ಶ್ರೀಮಠದ ಚಿನ್ನದ ರಥದಲ್ಲಿ ಶ್ರೀದೇವಿ-ಭೂದೇವಿ ಸಹಿತ ಶ್ರೀನಿವಾಸ ದೇವರ ವಿಗ್ರಹ ಹಾಗೂ ವಿಜಯದಾಸರ ಭಾವಚಿತರವನ್ನಿಟ್ಟು ಉಡುಪಿಯ ರಥಬೀದಿಯಲ್ಲಿ ಸಂಭ್ರಮದಿಂದ ಶೋಭಾಯಾತ್ರೆ ನಡೆಸಲಾಯಿತು.
ಕಿರಿಯ ಪಟ್ಟದ ಸುಶ್ರೀಂದ್ರ ತೀರ್ಥ ಶ್ರೀಪಾದರು, ಡಾ. ಎ.ಬಿ. ಶಾಮಾಚಾರ್ಯ, ಡಾ. ಬಿ.ಎಸ್. ಅನಿಲಕುಮಾರ್, ಮಠದ ನಾಗರಾಜ ಆಚಾರ್ಯ, ಡಾ.ಬಿ.ಗೋಪಾಲ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ್ ಭಟ್ ಹಾಗೂ ಮಠದ ಶಿಷ್ಯರು, ಭಕ್ತರು ಉಪಸ್ಥಿತರಿದ್ದರು.
ದಾಸ ಸಾಹಿತ್ಯದ ಸಮಾರೋಪ ಸಮಾರಂಭದ ಬೆಳಗಿನ ಅವಧಿಯಲ್ಲಿ 12ಕ್ಕೂ ಅಧಿಕ ವಿದ್ವಾಂಸರು ದಾಸ ಸಾಹಿತ್ಯದ ಕುರಿತು ವಿಚಾರ ಮಂಡಿಸಿದರು. ಮೈಸೂರಿನ ಡಾ. ಎನ್.ಕೆ. ರಾಮಶೇಷನ್ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬಲರಾಮ ಆಚಾರ್ಯ, ರಮಾ ವಿಠ್ಠಲ, ಎ.ನಿರಂಜನ್, ವಿಜಯಮಾಲಾ ಗುರುಪ್ರಸಾದ್, ರಾಮದುರ್ಗದ ಕವಿತಾ ವಿಷ್ಣು ಬಲಗುಂದಿ, ಪರಿಮಳಾ ಕೃಷ್ಣ, ಓಂಪ್ರಕಾಶ್ ಭಟ್, ಡಾ. ಬಲ್ಲೂರಿ ಉಮಾದೇವಿ ಇತರರು ವಿಚಾರ ಮಂಡಿಸಿದರು.
ಯುವ ಸಾಹಿತಿ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು.