ಉದ್ಯೋಗದಲ್ಲಿ ಕನ್ನಡಿಗರಿಗೆ ಬೇಕು ಶೇ.25 ಮೀಸಲು : ಸರ್ವಾಧ್ಯಕ್ಷ ಡಾ.ಉದಯಶಂಕರ ಪುರಾಣಿಕ ಅನಿಸಿಕೆ

5 Hanumasagara 4a
Published on

ಹನುಮಸಾಗರ: ಕನ್ನಡ ಭಾಷೆ ಉಳಿವಿನ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಕನ್ನಡದಲ್ಲಿ ದೊರೆಯುವಂತಾಗಬೇಕು. ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.25 ಮೀಸಲಾತಿ ನೀಡಬೇಕು. ಇದಕ್ಕೆ ಕಾನೂನು ತೊಡಕಿಲ್ಲ. ಮಾಡುವ ಇಚ್ಛಾಶಕ್ತಿ ಬೇಕು ಎಂದು 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಉದಯಶಂಕರ ಪುರಾಣಿಕ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಹಮ್ಮಿಕೊಂಡಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದರು. ನಾಡು-ನುಡಿ, ಅಸ್ಮಿತೆಗಿಂತ ದೊಡ್ಡವರಿಲ್ಲ. ಜಗತ್ತಿನ ಎಲ್ಲ ರಂಗಗಳಲ್ಲಾಗುವ ಬೆಳವಣಿಗೆ ತಿಳಿಸಲು ನಮಗೆ ಮಾತೃಭಾಷೆ ಬೇಕು. ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಎಂದರೆ ಕೇವಲ ಇಂಗ್ಲಿಷ್ ಎಂಬಂತಾಗಿದೆ. ಕನ್ನಡದಲ್ಲಿ ಇಂಥ ಪದವಿ ಪಡೆದರೆ ಕೆಲಸ ಸಿಗದು ಎಂಬ ಭಾವನೆ ಸಲ್ಲ. ಜಪಾನ್, ಜರ್ಮನ್ ಮುಂತಾದ ದೇಶಗಳಲ್ಲಿ ಅವರವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಂಗ್ಲಿಷ್ ಸಂವಹನ ಭಾಷೆಯಾಗಿ ಕಲಿಯಬೇಕಷ್ಟೆ. ಸರ್ಕಾರವೂ ಉದ್ಯೋಗದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಶೇ.25 ಮೀಸಲು ನೀಡಬೇಕು. ಇದಕ್ಕೆ ಯಾವುದೇ ಕಾನೂನು ತೊಡಕಾಗುವುದಿಲ್ಲವೆಂದು ವಾದಿಸಿದರು.

ನಾನು ಕುಕನೂರಿನ ದ್ಯಾಂಪುರ ಗ್ರಾಮದವ. ನನ್ನ ಕುಟುಂಬ ಸಂಪೂರ್ಣ ಕನ್ನಡ ಕಾರ್ಯದಲ್ಲಿ ತೊಡಗಿದೆ. ಪ್ರಧಾನಿಯವರ ಅಟಲ್‌ಜೀ ಯೋಜನೆಯಲ್ಲಿ ಕೆಲಸ ಮಾಡುತ್ತಿರುವೆ. ತವರೂರಿನಲ್ಲಿ ಸಮ್ಮೇಳನಾಧ್ಯಕ್ಷನಾಗಿರುವುದು ಹೆಮ್ಮೆ ಎನಿಸುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಸ್ಪಂದಿಸಬೇಕು. ಜಿಲ್ಲಾಕಾರಿ ಆದಿಯಾಗಿ ಎಲ್ಲ ಅಕಾರಿಗಳು ಸಮ್ಮೇಳನಗಳಲ್ಲಿ ಭಾಗಿಯಾಗಬೇಕು. ಸಮಸ್ಯೆಗಳು, ನಿರ್ಣಯಗಳ ಅನುಷ್ಠಾನಕ್ಕೆ ಯತ್ನಿಸಬೇಕು. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದು, ಪರ್ಯಾಯ ಮಾರ್ಗ ಬೇಕಿದೆ. ಸಮಾನಾಂತರ ಜನಾಶಯದ ಜತೆಗೆ ಹೂಳು ತೆರವಾಗಬೇಕು. ಹೂಳಿನಿಂದ ನ್ಯಾನೋ ಕಾಂಕ್ರಿಟ್ ಮಾಡುವ ತಂತ್ರಜ್ಞಾನವಿದೆ. ನೀರು ಪೋಲಾಗದಂತೆ, ಸದ್ಬಳಕೆ ಮಾಡುವ ತಂತ್ರಾಂಶಗಳಿವೆ. 25 ವರ್ಷದಲ್ಲಿ ಜಿಲ್ಲೆಯಲ್ಲಾದ ಅಭಿವೃದ್ಧಿ, ಮುಂದೆ ಆಗಬೇಕಾದ ಕಾರ್ಯಗಳ ಚರ್ಚೆಯಾಗಬೇಕು. ಅಂಜನಾದ್ರಿ ಅಭಿವೃದ್ಧಿ, ಕಾರ್ಖಾನೆ ಧೂಳಿಗೆ ಮುಕ್ತಿ ಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net