ಅಭಿವೃದ್ಧಿ ಕಾಣದ ಹಾಲೇರಿ ಜಲಪಾತ

19sunti02
Published on

ಸುಂಟಿಕೊಪ್ಪ: ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿ ಗ್ರಾಮ ತನ್ನದೇ ಇತಿಹಾಸ ಹೊಂದಿದೆ. ಸುತ್ತಲೂ ಕಾಫಿ, ಕರಿಮೆಣಸು, ಭತ್ತ ಇನ್ನಿತರ ಕೃಷಿ ಭೂಮಿಯಿಂದಲೇ ಆವರಿಸಿರುವ ಈ ಪ್ರದೇಶ ಸದಾ ಹಚ್ಚಹಸಿರಿನಿಂದ, ಪ್ರಶಾಂತ ವಾತಾವರಣ ಜತೆಗೆ ಹತ್ತು ಹಲವು ಐತಿಹ್ಯಗಳು ಹಾಲೇರಿ ಗ್ರಾಮದ ಒಡಲಿನಲ್ಲಿದೆ.

ಶಿವಮೊಗ್ಗ ಜಿಲ್ಲೆಯಿಂದ ಇಕ್ಕೇರಿ ವಂಶಸ್ಥರೊಬ್ಬರು ಸನ್ಯಾಸಿ ವೇಷದಲ್ಲಿ ಹಾಲೇರಿ ಗ್ರಾಮಕ್ಕೆ ಆಗಮಿಸಿ ಪೂಜೆ ಪುರಸ್ಕಾರಗಳನ್ನು ಸಲ್ಲಿಸುತ್ತಾ ಗ್ರಾಮದಲ್ಲಿ ನೆಲೆಯೂರಿದರು. ನಂತರದ ದಿನಗಳಲ್ಲಿ ಇಲ್ಲಿನ ಜನರನ್ನೇ ಒಗ್ಗೂಡಿಸಿ ಗ್ರಾಮದಲ್ಲಿ ಬಲಿಷ್ಠ ಸೇನೆ ಕಟ್ಟಿಕೊಂಡು ಮಡಿಕೇರಿ ರಾಜ್ಯವನ್ನು ಆಳ್ವಿಕೆಗೆ ಮುನ್ನುಡಿ ಇಟ್ಟರು.

ಹೌದು, ಮಡಿಕೇರಿ ರಾಜ್ಯವಾಗಿದ್ದ ಕಾಲಘಟ್ಟದಲ್ಲಿ ಹಾಲೇರಿ ರಾಜವಂಶಸ್ಥರು ಆಳ್ವಿಕೆ ನಡೆಸಿದ್ದರು. ಮೊದಲಿಗೆ ಅವರ ಆಡಳಿತ ಶುರುವಾಗಿದ್ದೇ ಹಾಲೇರಿ ಗ್ರಾಮದಿಂದ. ಇಲ್ಲಿನ ಗ್ರಾಮಸ್ಥರೊಂದಿಗೆ ಬಲಿಷ್ಠ ಸೇನೆ ಕಟ್ಟಿಕೊಂಡಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅದಕ್ಕೆ ಪುಷ್ಟಿಕರಿಸುವಂತಹ ಅದೆಷ್ಟೋ ಕೆತ್ತನೆ ಶಿಲೆಗಳು ಕುರುಹುಗಳು ಗ್ರಾಮದಲ್ಲಿ ಕಂಡು ಬರುತ್ತಿದೆ.

ಈ ಗ್ರಾಮದಲ್ಲಿ ಹಾಲೇರಿ ರಾಜವಂಶಸ್ಥರು ಬಂದು ನೆಲೆಸಿದ ಬಳಿಕ ಈಶ್ವರ ಹಾಗೂ ಬಸವೇಶ್ವರ ದೇವಾಲಯ ನಿರ್ಮಿಸಿದರು. ಆ ದೇವಸ್ಥಾದ ಛಾವಣಿಗೆ ಕಂಚಿನ ಹೊದಿಕೆ ಅಳವಡಿಸಲಾಗಿದೆ. ಕಾಲ ಉರುಳಿದಂತೆ ಈಶ್ವರನ ದೇವಾಲಯದಲ್ಲಿ ಪೂರ್ವಿಕರು ಬೇಟೆಗಳ ಹರಕೆ ತೀರಿಸಿದರು. ಹೀಗೆ ಮುಂದುವರಿದು ಈಶ್ವರನ ದೇಗುಲವೇ ಭದ್ರಕಾಳೇಶ್ವರಿ ದೇವಾಲಯವಾಗಿ ರೂಪುಗೊಂಡಿದೆ. ದೇವಾಲಯದಲ್ಲಿ ವಾರ್ಷಿಕ ವಿಶೇಷ ಪುಜೆ ನೆರವೇರಲಿದೆ. ದೇವಾಲಯಕ್ಕೆ ಒಳಪಟ್ಟ 50 ಕುಟುಂಬಗಳು ಪಾಲ್ಗೊಂಡು ತಾಯಿ ಭದ್ರಕಾಳೇಶ್ವರಿಗೆ ವಿಶೇಷ ಪೂಜೆ ಹರಕೆಗಳನ್ನು ಸಲ್ಲಿಸುತ್ತಾರೆ. ಬಸವೇಶ್ವರ ದೇವಸ್ಥಾನದಲ್ಲಿರುವ ಬಾಲಕೃಷ್ಣ ರೈ ಎಂಬುವರು ಪ್ರತಿನಿತ್ಯ ಪುಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದಾರೆ.

ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿರುವ ಹಾಲೇರಿ ಗ್ರಾಮಕ್ಕೆ ತೆರಳಬೇಕಾದರೆ ಮೊದಲಿಗೆ ಎದುರಾಗುವುದು ರಸ್ತೆ ಸಮಸ್ಯೆ. ಕಿರಿದಾಗಿರುವ ರಸ್ತೆಯಲ್ಲಿ 2 ವಾಹನಗಳು ಸರಾಗವಾಗಿ ಸಂಚರಿಸಲು ಕಷ್ಟಸಾಧ್ಯ. ಹಲವು ಬಾರಿ ಪ್ರವಾಸಿಗರು ಹಿಂದೆ ಮುಂದೆ ಸಂಚರಿಸಲು ಪರದಾಡುವ ಪರಿಸ್ಥಿತಿ ಇದೆ. ಜತೆಗೆ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದ್ದು ಸುಗಮ ಸಂಚಾರ ಸಾಧ್ಯವಿಲ್ಲ. ಕಿರಿದಾಗಿರುವ ರಸ್ತೆ ವಿಸ್ತರಣೆ ಮಾಡುವ ಅವಶ್ಯಕತೆ ಇದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net