

ಮಂಗಳೂರು: ದ.ಕ.ವ್ಯಾಪ್ತಿಯ ಗ್ರಾಪಂ ಚುನಾವಣೆ ಎರಡು ಹಂತಗಳಲ್ಲಿ (ಡಿ.22 ಹಾಗೂ 27)ಬೆಳಗ್ಗೆ 7ರಿಂದ ಸಾಯಂಕಾಲ 5ರ ತನಕ ನಡೆಯಲಿದ್ದು, ಸಿದ್ಧತಾ ಕಾರ್ಯಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.
ಮೊದಲ ಹಂತದಲ್ಲಿ 106 ಗ್ರಾಮ ಪಂಚಾಯಿತಿಗಳಲ್ಲಿ 1681 ಸದಸ್ಯ ಸ್ಥಾನಗಳಿಗೆ ಹಾಗೂ ಎರಡನೇ ಹಂತದಲ್ಲಿ 114 ಗ್ರಾಪಂಗಳ 1541 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗ್ರಾಮೀಣ ಚುನಾವಣೆಗಳು ಇತರ ಚುನಾವಣೆಗಳಿಗಿಂತ ಭಿನ್ನವಾಗಿ ಸಾಂಪ್ರದಾಯಿಕವಾಗಿ ಮತಪೆಟ್ಟಿಗೆಗಳ ಮೂಲಕವೇ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ವೇಳಾಪಟ್ಟಿ ಹೀಗಿದೆ: ಮೊದಲನೇ ಹಂತದ ಚುನಾವಣೆಗೆ ಸೋಮವಾರ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಡಿ.11 ಕೊನೆಯ ದಿನ. 12ರಂದು ನಾಮಪತ್ರ ಪರಿಶೀಲನೆ, 14ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. 22ರಂದು ಮತದಾನ, ಮರು ಮತದಾನ ಅವಶ್ಯವಾದರೆ 24ರಂದು ನಡೆಯಲಿದೆ. ಎರಡನೇ ಹಂತದ ಚುನಾವಣೆಗೆ ಡಿ.11ರಂದು ಅಧಿಸೂಚನೆ ಪ್ರಕಟವಾಗಲಿದ್ದು ನಾಮಪತ್ರ ಸಲ್ಲಿಕೆಗೆ 16 ಕೊನೆಯ ದಿನ. ನಾಮಪತ್ರ ಪರಿಶೀಲನೆ 17ರಂದು, ನಾಮಪತ್ರ ಹಿಂಪಡೆಯಲು 19 ಕೊನೆಯ ದಿನ. 27ರಂದು ಚುನಾವಣೆ, ಮರು ಮತದಾನ ಅಗತ್ಯವಿದ್ದರೆ 29ರಂದು ಇರಲಿದೆ. ಎರಡು ಹಂತದ ಚುನಾವಣೆಗಳಿಗೂ ಮತ ಎಣಿಕೆ ಒಂದೇ ದಿನ ಡಿ.30ರಂದು ಬೆಳಗ್ಗೆ 8ರಿಂದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
22ರಂದು ಮಂಗಳೂರು ತಾಲೂಕಿನ 37, ಮೂಡುಬಿದಿರೆಯ 12 ಮತ್ತು ಬಂಟ್ವಾಳ 57 ಗ್ರಾಪಂಗಳಿಗೆ ಒಟ್ಟು 817 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದರೆ, 27ರಂದು ಬೆಳ್ತಂಗಡಿಯ 46, ಪುತ್ತೂರಿನ 22, ಸುಳ್ಯದ 25, ಕಡಬದ 21 ಗ್ರಾಪಂಗಳ 719 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ.
ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಮಾಡಲಾಗಿದ್ದು, ಸೂಕ್ತ ತರಬೇತಿ ನೀಡಲಾಗಿದೆ. ಚುನಾವಣೆಗೆ ಬೇಕಾದ ಒಟ್ಟು 2626 ಮತಪೆಟ್ಟಿಗೆಗಳನ್ನು ಆಯಿಲಿಂಗ್ ಮಾಡಿಸಿ ಸಿದ್ಧವಾಗಿ ಇರಿಸಲಾಗಿದೆ. ಮತಪತ್ರ ಮುದ್ರಣಕ್ಕೆ ಬೇಕಾದ ಕಾಗದಗಳನ್ನು ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದ್ದು, ಸ್ಥಳೀಯವಾಗಿ ಮುದ್ರಿಸಿಕೊಳ್ಳುವ ಬಗ್ಗೆ ನಿರ್ದೇಶನ ನೀಡಲಾಗಿದೆ.
ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ ಸುದ್ದಿಗೋಷ್ಠಿಯಲ್ಲಿದ್ದರು.
ಹೆಚ್ಚುವರಿ ಮತಗಟ್ಟೆ
ಜಿಲ್ಲೆಯಲ್ಲಿ ಒಟ್ಟು 1137 ಮೂಲ ಮತಗಟ್ಟೆಗಳಿದ್ದು ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಸಾವಿರಕ್ಕಿಂತ ಹೆಚ್ಚು ಮತದಾರರಿರುವ ಕಡೆಗಳಲ್ಲಿ 438 ಆಕ್ಸಿಲರಿ ಮತಗಟ್ಟೆ(ಹೆಚ್ಚುವರಿ) ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 5,26,288 ಮಹಿಳೆಯರು, 5,12,908 ಪುರುಷರು ಸೇರಿದಂತೆ 10,39,217 ಮತದಾರರಿದ್ದಾರೆ. ಪ್ರಥಮ ಹಂತದ ಚುನಾವಣೆ ನಡೆಯುವ ಸ್ಥಳಗಳಲ್ಲಿ ಡಿ.3ರವರೆಗೆ ಹಾಗೂ ಎರಡನೇ ಹಂತದ ಕಡೆಗಳಲ್ಲಿ ಡಿ.8ರವರೆಗೆಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಯಲ್ಲಿ 228 ಗ್ರಾಪಂಗಳಿವೆ. ಬಂಟ್ವಾಳದ ಆರಂಬೋಡಿ ಮತ್ತು ಪುದು ಹಾಗೂ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಪಂಗಳಲ್ಲಿ ಅವಧಿ ಮುಗಿಯದ ಹಿನ್ನೆಲೆಯಲ್ಲಿ ಚುನಾವಣೆ ಇಲ್ಲ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವ ಬಜ್ಪೆ, ಮೆನ್ನಬೆಟ್ಟು, ಕಿನ್ನಿಗೋಳಿ, ಕೊಂಡೆಮೂಲ ಮತ್ತು ಮಳವೂರು ಗ್ರಾಪಂಗಳಿಗೆ ಚುನಾವಣೆ ಇಲ್ಲ.
-ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.