

ಶಿವಮೊಗ್ಗ: ಲಂಡನ್‌ನಿಂದ ಬೆಲೆ ಬಾಳುವ ಗಿಫ್ಟ್ ಬಂದಿದೆ ಎಂದು ನಂಬಿಸಿ ಭದ್ರಾವತಿಯ ವ್ಯಕ್ತಿಯೊಬ್ಬರಿಗೆ 8.56 ಲಕ್ಷ ರೂ. ವಂಚಿಸಲಾಗಿದೆ. ಲಂಡನ್‌ನಿಂದ ಮೈಕಲ್ ಮ್ಯಾಕ್ ಡೊನಾಲ್ಡ್ ಹೆಸರಿನಲ್ಲಿ ಕರೆ ಮತ್ತು ಮೆಸೇಜ್ ಮಾಡಿ 43 ಲಕ್ಷ ರೂ. ಮೌಲ್ಯದ ಗಿಫ್ಟ್ ಕಳುಹಿಸುತ್ತಿರುವುದಾಗಿ ನಂಬಿಸಿದ್ದ. ಗಿಫ್ಟ್ ಕಳುಹಿಸಲು ಕಂಪನಿಯ ವೇಯ್ಟಿಂಗ್ ಚಾರ್ಜ್ 5 ಸಾವಿರ ರೂ. ಪಾವತಿಸುವಂತೆ ತಿಳಿಸಿ ಬ್ಯಾಂಕ್ ಖಾತೆ ಮತ್ತು ಗೂಗಲ್ ಪೇ ನಂಬರ್ ಕಳುಹಿಸಿದ್ದ. ಭದ್ರಾವತಿಯ ವ್ಯಕ್ತಿ ಆ ಖಾತೆಗಳಿಗೆ ಹಣ ಹಾಕಿದ್ದರು. ಬಳಿಕ ವಿವಿಧ ಚಾರ್ಜ್‌ಗಳ ಹೆಸರಿನಲ್ಲಿ 6.53 ಲಕ್ಷ ರೂ. ವರ್ಗಾಯಿಸಿಕೊಂಡಿದ್ದ ಎನ್ನಲಾಗಿದೆ.
ಕೆಲ ದಿನದ ಬಳಿಕ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿ ಲಕ್ಷಾಂತರ ಮೌಲ್ಯದ ಗಿಫ್ಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಪಡೆದುಕೊಳ್ಳಲು 2.03 ಲಕ್ಷ ರೂ. ಪಾವತಿಸಬೇಕೆಂದು ತಿಳಿಸಿದ್ದು, ವಿವಿಧ ನಂಬರ್‌ಗಳಿಂದ ಕರೆ ಮಾಡಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ಒಟ್ಟು 8.56 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರೂ ಗಿಫ್ಟ್ ಬಾರದಿದ್ದರಿಂದ ಅನುಮಾನಗೊಂಡು ಪರಿಚಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.