

ಚೇತನ್ ಮಧುರೆ
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ಕನಸವಾಡಿ ಪಂಚಾಯಿತಿ ವ್ಯಾಪ್ತಿಗೆ ಬರುವ ಮಧುರೆಕ್ರಾಸ್-ದೊಡ್ಡಬೆಳವಂಗಲ ಮಾರ್ಗದಲ್ಲಿನ ಮಧುರೆ ಕೆರೆ ಅಂಗಳದಲ್ಲಿ ಕಸದ ರಾಶಿಯಿಂದಾಗಿ ಜಲಮೂಲಕ್ಕೆ ಕುತ್ತು ಬಂದಿದೆ.
ಈ ಭಾಗದಲ್ಲಿ ಇದೊಂದು ಬಗೆಹರಿಸಲಾಗದಂತ ಸಮಸ್ಯೆಯಾಗಿ ಬಿಗಡಾಯಿಸಿದೆ, ಆಗಾಗ ಪಂಚಾಯಿತಿ ವತಿಯಿಂದ ಕಸ ತೆರವು ಮಾಡುವ ಕೆಲಸ ನಡೆಯುತ್ತಿದ್ದರೂ, ಕೆಲವೇ ದಿನಗಳಲ್ಲಿ ಇದೇ ಸ್ಥಳದಲ್ಲಿ ರಾಶಿಗಟ್ಟಲೆ ಕಸ ಶೇಕರಣೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ತ್ಯಾಜ್ಯ ರಾಶಿ ಮಳೆನೀರಿನೊಂದಿಗೆ ಬೆರೆದು ಗಬ್ಬುನಾರುತ್ತಿದೆ. ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಮೂಗುಮುಚ್ಚಿಕೊಳ್ಳುವಂತೆ ಕಸ ಕೊಳೆತಿದೆ. ಬೀದಿನಾಯಿಗಳು ಕಸವನ್ನು ಎಳೆದು ರಸ್ತೆಯಲ್ಲಿ ಚೆಲ್ಲಾಡುತ್ತಿದ್ದು ಈ ಭಾಗದ ವಾತಾವರಣ ಸಹಿಸಲಸಾಧ್ಯವಾಗಿದೆ.
ಮದ್ಯದಂಗಡಿ ತ್ಯಾಜ್ಯ: ಈ ರಸ್ತೆಯಲ್ಲಿನ ಮದ್ಯದಂಗಡಿಗಳು ಸೇರಿ ದೊಡ್ಡಬಳ್ಳಾಪುರದಲ್ಲಿನ ಸಾಕಷ್ಟು ಮದ್ಯದಂಗಡಿಗಳ ತ್ಯಾಜ್ಯದ ರಾಶಿ ಮಧುರೆ ಕೆರೆ ಅಂಗಳಕ್ಕೆ ಸೇರುತ್ತಿದೆ, ಪ್ರತಿ ದಿನ ರಾತ್ರಿ ವೇಳೆ ವಾಹನಗಳಲ್ಲಿ ಕಸ ತಂದು ಸುರಿಯಲಾಗುತ್ತಿದೆ, ಈ ಬಗ್ಗೆ ಕೆಲವು ಸ್ಥಳೀಯರು ವಿಡಿಯೋ ಮಾಡಿ ಕಸ ಹಾಕದಂತೆ ಎಚ್ಚರಿಕೆ ನೀಡಿದರೆ ಅವರನ್ನೇ ದಬಾಯಿಸಿ ಬೆದರಿಕೆ ಹಾಕುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಈ ಕಸದ ರಾಶಿಯಲ್ಲಿ ಭಾಗಶಃ ಮದ್ಯದ ಟೆಟ್ರಾಪ್ಯಾಕೇಟ್‌ಗಳು, ಪ್ಲಾಸ್ಟಿಕ್ ಲೋಟ, ಪ್ರಾಣಿಜನ್ಯ ತ್ಯಾಜ್ಯವೇ ಕಂಡುಬರುತ್ತಿದ್ದು ಮದ್ಯದಂಗಡಿಗಳ ಕಸ ಎಂಬುದನ್ನು ದೃಢಪಡಿಸುತ್ತಿದೆ. ಆದರೆ ಈ ಭಾಗದ ಅಬಕಾರಿ ಇಲಾಖೆಯಾಗಲಿ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಈ ಬಗ್ಗೆ ತುಟಿಬಿಚ್ಚುತ್ತಿಲ್ಲ, ಮದ್ಯದಂಗಡಿಗಳು ರಾಜಕೀಯ ಪ್ರಭಾವಿಗಳ ಕೈಯಲ್ಲಿರುವುದರಿಂದ ಅಧಿಕಾರಿಗಳು ಸಹ ಕೈಕಟ್ಟಿ ಕೂರುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಬೀದಿ ಬದಿ ವ್ಯಾಪಾರದ ಕಸ: ಇನ್ನು ಈ ರಸ್ತೆಯುದ್ದಕ್ಕೂ ಇರುವ ಪಾನಿಪುರಿ ಅಂಗಡಿ, ಬೋಂಡವಡೆ ಅಂಗಡಿಗಳು, ಹೋಟೆಲ್‌ಗಳು ಹಾಗೂ ಕೋಳಿ ಅಂಗಡಿಗಳ ತ್ಯಾಜ್ಯವೂ ಇದೇ ಕಸದ ಬ್ಲಾಕ್‌ಸ್ಪಾಟ್ ಸೇರುತ್ತಿದೆ ದಿನೆ ದಿನೇ ಕಸದ ರಾಶಿ ಉಲ್ಭಣವಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಬದಲಾಗುತ್ತಿದೆ. ಸಂಬಂಧಪಟ್ಟವರು ಇದಕ್ಕೆ ಕಡಿವಾಣ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಪ್ಲಾಸ್ಟಿಕ್ ನಿಷೇಧವಿಲ್ಲ: ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡುವುದು ಈ ಭಾಗದಲ್ಲಿ ಕೇವಲ ತೋರಿಕೆಯಾಗಿದೆ, ಇಲ್ಲಿನ ಕಸದ ರಾಶಿಯಲ್ಲಿ ಹಸಿ ಕಸಕ್ಕಿಂತ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಕೈಚೀಲ ಸೇರಿ ನಿಷೇಧಿತ ಪ್ಲಾಸ್ಟಿಕ್‌ಗಳು ಕಂಡುಬರುತ್ತದೆ, ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಈ ಭಾಗದಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ, ಮಳಿಗೆಗಳಲ್ಲಿ ರಾಜಾರೋಷವಾಗಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಧಾರ್ಮಿಕ ಕ್ಷೇತ್ರಕ್ಕೆ ಕಪ್ಪುಚುಕ್ಕೆ: ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಕನಸವಾಡಿಯ ಶ್ರೀ ಶನಿಮಹತ್ಮಾ ದೇವಸ್ಥಾನದ ಕೂಗಳತೆ ದೂರದಲ್ಲೇ ಇಂಥ ಅವ್ಯವಸ್ಥೆ ಕಂಡುಬರುತ್ತಿದೆ, ಇಲ್ಲಿ ವಾರಾಂತ್ಯದಲ್ಲಿ ನೆರೆ ಜಿಲ್ಲೆ ಸೇರಿ ಹೊರರಾಜ್ಯದಿಂದಲೂ ನೂರಾರು ಭಕ್ತರು ಆಗಮಿಸುತ್ತಾರೆ ಇವರಿಗೆ ಇಲ್ಲಿನ ಕಸದ ರಾಶಿ ಸ್ವಾಗತಕೋರುವಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಭಾಗದಲ್ಲಿ ಕಸದ ರಾಶಿ ಶೇಖರಣೆಯಾಗಿರುವುದು ಗಮನಕ್ಕೆ ಬಂದಿದೆ, ಹಲವು ಬಾರಿ ತೆರವುಗೊಳಿಸಿದರೂ ಇದು ಪುನಾವರ್ತನೆಯಾಗುತ್ತಿದೆ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಮೇ 28 ರಂದು ಸಭೆ ಕರೆಯಲಾಗಿದೆ, ಮಳಿಗೆಗಳಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗುವುದು ಜತೆಗೆ ಈ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು.
ಕೆ.ರಾಮಣ್ಣ, ಪಿಡಿಒ ಕನಸವಾಡಿ ಪಂಚಾಯಿತಿ
--------
ಕೇವಲ ಕಸ ತೆರವುಗೊಳಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ, ಯಾರೂ ಇಲ್ಲಿ ಕಸ ತಂದು ಸುರಿಯುತ್ತಿದ್ದಾರೋ ಅಂಥ ಮದ್ಯದಂಗಡಿ ಹಾಗೂ ಮಳಿಗೆಗಳ ಮಾಲೀಕರಿಗೆ ಪಂಚಾಯಿತಿಯಿಂದ ನೋಟಿಸ್ ನೀಡಬೇಕು, ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಬೇಕು, ಇಲ್ಲವಾದರೆ ಇದು ಕೇವಲ ಕಣ್ಣೋರೆಸುವ ತಂತ್ರವಾಗಲಿದೆ.
ಕೆ.ಸತೀಶ್‌ಕುಮಾರ್, ತಾಲೂಕು ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ