ಸೂಲಿಬೆಲೆ-ಬೆಟ್ಟಳ್ಳಿ ಕೆರೆಗೆ ಕಸ ಕಂಟಕ

gar
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಜಲಮೂಲಗಳನ್ನು ರಕ್ಷಣೆ ಮಾಡಬೇಕಾದ ಪಂಚಾಯಿತಿಯೇ ಜಲಮೂಲದ ನಾಶಕ್ಕೆ ಮುಂದಾಗಿದೆ.. ಒಣ ಹಾಗೂ ಹಸಿ ಕಸ ಬೇರ್ಪಡಿಸುವಂತೆ ಅರಿವು ಮೂಡಿಸಬೇಕಾದ ಅಧಿಕಾರಿಗಳೇ ಕಸ ಮಿಶ್ರಣ ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿಸಬೇಕಾದ ಜನಪ್ರತಿನಿಧಿಗಳ ಕಣ್ಣೆದೆರೇ ಪ್ಲಾಸ್ಟಿಕ್ ಮಿಶ್ರಿತ ಹಸಿ ಕಸ ಬೆಟ್ಟದಂತೆ ಬೆಳೆಯುತ್ತಿದೆ...!

ಹೌದು. ಹೊಸಕೋಟೆ ತಾಲೂಕು ಸೂಲಿಬೆಲೆ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಪ್ರಮುಖ ಜಲಮೂಲವಾದ ಸೂಲಿಬೆಲೆ-ಬೆಟ್ಟಳ್ಳಿ ವ್ಯಾಪ್ತಿಯ ಕೆರೆ ಒಡಲು ಕಸದ ರಾಶಿಯಿಂದ ತುಂಬಿಹೋಗುತ್ತಿದೆ. ಸೂಲಿಬೆಲೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಹೋಬಳಿ ಕೇಂದ್ರದಲ್ಲಿ ಉತ್ಪತ್ತಿಯಾಗುವ ಅಷ್ಟೂ ಕಸವನ್ನು ತಂದು ಕೆರೆ ಒಡಲಿಗೆ ಸುರಿಯಲಾಗುತ್ತಿದೆ. ಸ್ವಚ್ಛತಾವಾಹಿನಿ ಎಂದು ಹೆಸರಿರುವ ಟ್ರ್ಯಾಕ್ಟರ್ ಮೂಲಕವೇ ಮಿಶ್ರಿತ ಕಸವನ್ನು ತಂದು ಕೆರೆಯಲ್ಲಿ ಭರ್ತಿ ಮಾಡುತ್ತಿರುವುದು ಪಂಚಾಯಿತಿಯ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ.

ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ದೊಡ್ಡ ಹೋಬಳಿಯೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸೂಲಿಬೆಲೆಯಲ್ಲಿ ಪಂಚಾಯಿತಿಗೂ ಯಥೇಚ್ಛ ತೆರಿಗೆ ಹಣ ಹರಿದು ಬರುತ್ತಿದೆ, ಆದರೆ ತೆರಿಗೆ ಹಣವನ್ನು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಮರ್ಪಕವಾಗಿ ಬಳಸುತ್ತಿಲ್ಲ ಎಂಬ ಆರೋಪವಿದೆ ಅದರಲ್ಲೂ ಕಸ ವಿಲೇವಾರಿ ವಿಷಯದಲ್ಲಿ ಬೇಜಬ್ದಾರಿ ಧೋರಣೆ ಅನುಸರಿಸುತ್ತಿರುವ ಪಂಚಾಯಿತಿ ಪ್ರತಿನಿತ್ಯ ಸೂಲಿಬೆಲೆ ಪಂಚಾಯಿತಿ ವ್ಯಾಪ್ತಿಯ ಮನೆಮನೆಗಳ ಕಸ ಹಾಗೂ ವಾಣಿಜ್ಯ ಮಳಿಗೆಗಳ ಕಸವನ್ನು ಸಂಗ್ರಹಿಸಿ ಕೆರೆ ಒಡಲಿಗೆ ಸುರಿಯುತ್ತಾ ಬರುತ್ತಿದೆ. ತನ್ನದೇ ಪಂಚಾಯಿತಿ ವಾಹನದಲ್ಲಿ ಹಸಿ ಹಾಗೂ ಒಣ ಕಸದ ಮಿಶ್ರಣವನ್ನು ಸಾಗಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.

ಪ್ಲಾಸ್ಟಿಕ್ ಕಡಿವಾಣವಿಲ್ಲ: ಸೂಲಿಬೆಲೆ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮಳಿಗೆಗಳಲ್ಲೂ ಎಗ್ಗಿಲ್ಲದೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ಇದೆಲ್ಲ ಪಂಚಾಯಿತಿಯವರ ಮೂಗಿನ ನೇರದಲ್ಲಿಯೇ ನಡೆಯುತ್ತಿದ್ದರೂ ಪ್ಲಾಸ್ಟಿಕ್ ಉತ್ಪನ್ನ ಬಳಕೆ ಕಡಿವಾಣಕ್ಕೆ ಸಿಬ್ಬಂದಿ ಮುಂದಾಗಿಲ್ಲ. ರಸ್ತೆ ಬದಿಯ ತಿಂಡಿ ತಿನಿಸು ಮಾರುವ ಅಂಗಡಿಗಳಿಂದ ಎಲ್ಲ ಬಗೆಯ ಮಳಿಗೆಗಳಲ್ಲೂ ಸಾರ್ವಜನಿಕರವಾಗಿ ಕಾಣುವಂತೆಯೇ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಡೆಯುತ್ತಿದೆ. ಪ್ರತಿ ದಿನ ಕಸ ಸಂಗ್ರಹಿಸುವ ವಾಹನಗಳು ಮಳಿಗೆಗಳ ಮುಂದೆ ಸುರಿದಿರುವ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ ನೇರವಾಗಿ ಕೆರೆಗಳ ಅಂಗಳಕ್ಕೆ ಸುರಿದು ಬರುತ್ತಿವೆ.

ಕೆರೆ ತುಂಬಿಸುವ ಯೋಜನೆಗೂ ಕುತ್ತು: ರಾಜ್ಯ ಸರ್ಕಾರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಈ ಪಂಚಾಯಿತಿ ಸಿಬ್ಬಂದಿ ಕುತ್ತು ತರುತ್ತಿದ್ದಾರೆ, ಸ್ಥಳೀಯ ಶಾಸಕರು ಹೊಸಕೋಟೆ ವ್ಯಾಪ್ತಿಯ ಸೂಲಿಬೆಲೆ ಮತ್ತಿತರ ಕೆರಗಳಿಗೆ ನೀರು ತುಂಬಿಸುವ ಯೋಜನೆಗೆ ಒತ್ತು ನೀಡಿದ್ದಾರೆ. ಇದಕ್ಕೆ ಸಾಕಷ್ಟು ಪ್ರಯತ್ನವೂ ನಡೆಯುತ್ತಿದೆ. ಇಂಥ ಮಹತ್ವಾಕಾಂಕ್ಷೆ ಯೋಜನೆಗೆ ಬಲ ತುಂಬಬೇಕಾದ ಸ್ಥಳೀಯ ಆಡಳಿತವಾದ ಪಂಚಾಯಿತಿ ನೀರು ಸಂಗ್ರಹವಾಗಬೇಕಿರುವ ಕೆರೆಯ ಒಡಲಿಗೆ ಕಸ ಸುರಿದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಕೋಟೆ ತಾಲೂಕಿನಲ್ಲಿ ದೊಡ್ಡ ಹೋಬಳಿ ಎಂಬ ಹೆಗ್ಗಳಿಕೆ ಹೊಂದಿರುವ ಸೂಲಿಬೆಲೆಯಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿಲ್ಲ, ಹಸಿ ಹಾಗೂ ಒಣ ಕಸ ವಿಂಗಡಿಸುವ ಪರಿಪಾಠವೇ ಇಲ್ಲ, ಪಂಚಾಯಿತಿ ವಾಹನದಲ್ಲೇ ಮಿಶ್ರಣಗೊಂಡಿರುವ ಹಸಿ ಹಾಗೂ ಒಣ ಕಸವನ್ನು ಸಾಗಿಸುವ ದೃಶ್ಯಗಳು ಕಂಡುಬರುತ್ತವೆ ಪಂಚಾಯಿತಿ ಕರ್ತವ್ಯಲೋಪ ಎಸಗುತ್ತಿದೆ.

ಶ್ರೀನಿವಾಸ್, ಸೂಲಿಬೆಲೆ ಹೋಬಳಿ

ಸೂಲಿಬೆಲೆ-ಬೆಟ್ಟಳ್ಳಿ ಕೆರೆ ಅಂಗಳದಲ್ಲಿ ಪಂಚಾಯಿತಿ ವಾಹನದಲ್ಲೇ ಕಸ ಸಾಗಿಸಿ ಸುರಿದು ಕಸಕ್ಕೆ ಬೆಂಕಿಹಚ್ಚುವ ಕೆಲಸ ಮಾಡಲಾಗುತ್ತಿದೆ ಈ ಬಗ್ಗೆ ವಾಹನ ತಡೆದು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ, ಯಾರಿಗೆ ಕಂಪ್ಲೆಂಟ್ ಮಾಡ್ತಿರೋ ಮಾಡಿ ಎಂದು ಉಢಾಪೆಯಾಗಿ ಮಾತನಾಡುತ್ತಾರೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಪಾತಾಳ ಕಂಡಿದೆ ಇರುವ ಜಲಮೂಲಗಳನ್ನು ಹೀಗೆ ನಾಶ ಮಾಡಿದರೆ ಹೇಗೆ ಎಂಬುದೇ ಆತಂಕವಾಗಿದೆ.

ಸುರೇಶ್‌ಕುಮಾರ್, ಪರಿಸರ ಪ್ರೇಮಿ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net