ಕೆರೆ ಒತ್ತುವರಿ ಸರ್ವೇಗೆ ತೊಡಕು, ಸಮೀಕ್ಷೆ ಕಾರ್ಯ ಮುಂದೂಡಿಕೆ

difficulty in survey
ಗಂಗಾವತಿ ತಾಲೂಕಿನ ಸಂಗಾಪುರದ ಶ್ರೀ ಲಕ್ಷ್ಮೀ ನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದವರು ಒತ್ತುವರಿಯಾಗಿರುವ ರಸ್ತೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನೀರಾವರಿ ಇಲಾಖೆ ಎಇಇ ಅಮರೇಶಪ್ಪಗೆ ಮಂಗಳವಾರ ಮನವಿ ಮಾಡಿದರು. ಎಇ ಕೆ.ಅಮರೇಶ, ಸಂಘದ ಅಧ್ಯಕ್ಷ ಖಮರ್‌ಪಾಷಾ, ರೈತರಾದ ನಾಗರಾಜ್, ಸೈಯದ್ ಇತರರಿದ್ದರು.
Published on

ಗಂಗಾವತಿ: ರೈತರ ಆಕ್ಷೇಪಣೆಯಿಂದ ತಾಲೂಕಿನ ಸಂಗಾಪುರದ ಶ್ರೀ ಲಕ್ಷ್ಮೀನಾರಾಯಣ ಕೆರೆ ಒತ್ತುವರಿ ಪ್ರದೇಶದ ಸರ್ವೇ ಕಾರ್ಯ ಮುಂದೂಡಿದ್ದು, ಒತ್ತುವರಿದಾರರು ಸರ್ವೇಗೆ ಮಂಗಳವಾರ ಅವಕಾಶ ನೀಡಲಿಲ್ಲ.

ತಾಲೂಕಿನ ಸಂಗಾಪುರದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಸ.ನಂ.48ರಲ್ಲಿ 42.21 ಏಕರೆ ವ್ಯಾಪ್ತಿಯಲ್ಲಿ ಕೆರೆ ನಿರ್ಮಿಸಿದ್ದು, ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆ ಉಳಿಸುವುದಕ್ಕಾಗಿ ಶ್ರೀ ಲಕ್ಷ್ಮೀನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದವರು ಸಂಬಂಧಪಟ್ಟ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದು, ಸರ್ವೇ ಕೈಗೊಂಡ ನಂತರ ಇತ್ಯರ್ಥಕ್ಕೆ ಕಂದಾಯ ಇಲಾಖೆ ಸೂಚನೆ ನೀಡಿತ್ತು.

ಸರ್ವೇ ಇಲಾಖೆ ತಾಲೂಕಾಧಿಕಾರಿ ರಫೀಕ್ ನೇತೃತ್ವದ ತಂಡ ಡಿಜಿಟಲ್ ಮಾಪನದೊಂದಿಗೆ ಸ್ಥಳಕ್ಕೆ ಆಗಮಿಸಿದಾಗ ಒತ್ತುವರಿದಾರರು ಆಕ್ಷೇಪಿಸಿದ್ದು, ಕೆಲಕಾಲ ಗದ್ದಲ ಉಂಟಾಯಿತು. ಸ್ಥಳಕ್ಕೆ ಗ್ರಾಮೀಣ ಪಿಐ ರಂಗಪ್ಪ ದೊಡ್ಮನಿ ತೆರಳಿ ವಾತಾವರಣ ತಿಳಿಗೊಳಿಸಿದರು. ವಿವಾದಿತ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಇಲ್ಲದೇ ಸರ್ವೇಗೆ ಆಗಮಿಸಿದ ಕಂದಾಯ, ಸರ್ವೇ ಮತ್ತು ಗ್ರಾಪಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪೊಲೀಸ್ ಬಂದೋಬಸ್ತ್‌ಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದರಿಂದ ಜು.4ರಂದು ಸರ್ವೇ ಮುಂದೂಡಲಾಯಿತು. ಗ್ರಾಪಂ ಪಿಡಿಒ ಕಾಶೀನಾಥ, ನೀರಾವರಿ ಇಲಾಖೆ ಎಇಇ ಅಮರೇಶಪ್ಪ, ಎಇ ಕೆ.ಅಮರೇಶ, ಸಂಘದ ಅಧ್ಯಕ್ಷ ಖಮರ್ ಪಾಷಾ ಇತರರಿದ್ದರು.

ರಸ್ತೆ ಅಭಿವೃದ್ಧಿಗೊಳಿಸಿ: ಕೆರೆ ವ್ಯಾಪ್ತಿಯಲ್ಲಿ ಬರುವ ಸಂಗಾಪುರದಿಂದ ಸಿಂಗನಗುಂಡ ಸಂಪರ್ಕ ರಸ್ತೆಯೂ ಒತ್ತುವರಿಯಾಗಿದ್ದು, ಮೊದಲಿನಂತೆ ರಸ್ತೆ ಉಳಿಸಿಕೊಡುವಂತೆ ಶ್ರೀಲಕ್ಷ್ಮೀ ನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದವರು ನೀರಾವರಿ ಇಲಾಖೆ ಎಇಇ ಅಮರೇಶಪ್ಪಗೆ ಮನವಿ ಮಾಡಿದರು.

ರೈತರ ಅನುಕೂಲಕ್ಕಾಗಿ ರಸ್ತೆಯಿದ್ದು, ಟಿಪ್ಪರ್ ಸಂಚರಿಸುವಷ್ಟು ವಿಸ್ತಾರವಾಗಿತ್ತು. ಆದರೆ ಕೆಲ ರೈತರು ರಸ್ತೆ ಒತ್ತುವರಿ ಮಾಡಿ, ಬಿತ್ತನೆ ಶುರು ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಂಘದ ಅಧ್ಯಕ್ಷ ಖಮರ್ ಪಾಷಾ ಹೇಳಿದರು.

ಎಇಇ ಅಮರೇಶಪ್ಪ ಮಾತನಾಡಿ, ಸೇವಾ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಒತ್ತುವರಿಯಾಗಿದ್ದರೆ ಸಂಬಂಧಪಟ್ಟದವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದರು. ರೈತರಾದ ನಾಗರಾಜ್, ಸೈಯದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net