ಬಿಸಿಯೂಟ ಜವಾಬ್ದಾರಿಯಿಂದ ಶಿಕ್ಷಕರನ್ನು ಮುಕ್ತಗೊಳಿಸಿ

Basavaraj horatti
Published on

ಹುಬ್ಬಳ್ಳಿ : ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಅನುಷ್ಠಾನ ಹೊರೆಯಿಂದ ಶಿಕ್ಷಕರನ್ನು ಮುಕ್ತಗೊಳಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಶೈಕ್ಷಣಿಕ ವ್ಯವಸ್ಥೆ ನಿರ್ವಹಿಸುವ ಜತೆಗೆ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಅನುಷ್ಠಾನ, ಮಧ್ಯಾಹ್ನ ಬಿಸಿಯೂಟದ ನಿರ್ವಹಣೆ ಶಿಕ್ಷಕರಿಗೆ ಕಷ್ಟಸಾಧ್ಯವಾಗಿದೆ. ನಿತ್ಯದ ಹಾಜರಾತಿ, ಬಿಸಿಯೂಟ ಪಡೆದ ಮಕ್ಕಳ ಮಾಹಿತಿ, ಹಾಲು ಸ್ವೀಕರಿಸಿದ ಮಕ್ಕಳ ಮಾಹಿತಿ ಮತ್ತು ಪೂರಕ ಪೌಷ್ಟಿಕಾಂಶ ಪಡೆದವರ ಮಾಹಿತಿಯನ್ನು ಅದೇ ದಿನದಂದು ಕಡ್ಡಾಯವಾಗಿ ಸ್ಯಾಟ್ಸ್​ನಲ್ಲಿ ನಮೂದಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ.

ಆದರೆ, ಅನೇಕ ಶಿಕ್ಷಕರು ತಾಂತ್ರಿಕವಾಗಿ ಸಶಕ್ತರಲ್ಲದ ಕಾರಣ ಒತ್ತಡಕ್ಕೆ ಒಳಗಾಗಿ, ಅನೇಕ ಆರೊಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುವುದಾಗಿ ಬಸವರಾಜ ಹೊರಟ್ಟಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಹೀಗಾಗಿ, ಬಿಸಿಯೂಟ ಯೋಜನೆ ಹಾಗೂ ಮಗುವಿನ ದೈಹಿಕ ಸಮತೋಲನ ಬೆಳವಣಿಗೆ ಮತ್ತು ಅಪೌಷ್ಟಿಕ ನಿವಾರಣೆಗೆ ಮೊಟ್ಟೆ ಅಥವಾ ಚುಕ್ಕಿ, ಬಾಳೆಹಣ್ಣು ವಿತರಣೆ ಮತ್ತು ನಿರ್ವಹಣೆಯನ್ನು ಪ್ರತ್ಯೇಕ ವಿಭಾಗಕ್ಕೆ ವಹಿಸಬೇಕು. ಶಿಕ್ಷಕರಿಗೆ ಪಠ್ಯ ಚಟುವಟಿಕೆಗೆ ಸಂಪೂರ್ಣ ಸಮಯ ವಿನಿಯೋಗ ಮಾಡಲು ಅವಕಾಶ ನೀಡಿದರೆ ಗುಣಾತ್ಮಕ ಶಿಕ್ಷಣ ಪರಿಕಲ್ಪನೆ ಸಾಕಾರಗೊಳಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಇದೇ ಪದ್ಧತಿ ಮುಂದುವರೆದರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಿಲ್ಲ ಮತ್ತು ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯ ಒಳ್ಳೆಯದು. ಆದರೆ, ಕಾರ್ಯಕ್ರಮ ಅನುಷ್ಠಾನ ಪದ್ಧತಿ ಬದಲಾಗಬೇಕು ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶಿಕ್ಷಕರನ್ನು ಹೊರತುಪಡಿಸಿ ಬೇರೆ ವ್ಯವಸ್ಥೆ ಅಥವಾ ಬೇರೆ ಸಿಬ್ಬಂದಿ ನೇಮಿಸುವುದು ಸೂಕ್ತ. ಒಂದು ವೇಳೆ ಬೇರೆ ಸಿಬ್ಬಂದಿ ನೇಮಿಸಲು ಹಣಕಾಸು ಪರಿಸ್ಥಿತಿ ಯೋಚನೆ ಮಾಡಿದರೆ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತದೆ. ಮಕ್ಕಳ ಭವಿಷ್ಯಕ್ಕಿಂತ ಹಣ ಮುಖ್ಯವಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net