ಮನೆಯಿಂದಲೇ ದುಡಿಮೆ ಆಮಿಷ ತೋರಿಸಿ ವಂಚನೆ

cen police station
ಸಿಇಎನ್ ಪೊಲೀಸ್ ಠಾಣೆ
Published on

ಶಿವಮೊಗ್ಗ: ಮನೆಯಿಂದಲೇ ಕೆಲಸ ಮಾಡಿ ಪ್ರತಿದಿನ 7-8 ಸಾವಿರ ರೂ. ಸಂಪಾದಿಸಬಹುದೆಂದು ನಂಬಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ 53.17 ಲಕ್ಷ ರೂ. ವಂಚಿಸಲಾಗಿದೆ.

ಶಿವಮೊಗ್ಗದ ಮಹಿಳೆಯೊಬ್ಬರ ಟೆಲಿಗ್ರಾಂ ಖಾತೆಗೆ ವರ್ಕ್ ಫ್ರಮ್ ಹೋಮ್ ಎಂದು ಮೆಸೇಜ್ ಬಂದಿತ್ತು. ಟಾಸ್ಕ್ ಪೂರೈಸಿದರೆ ನಿತ್ಯ 7ರಿಂದ 8 ಸಾವಿರ ರೂ. ಗಳಿಸಬಹುದು ಎಂದು ತಿಳಿಸಲಾಗಿತ್ತು. ಮೆಸೇಜ್‌ನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಮಹಿಳೆಗೆ ಮೊದಲು 10 ಸಾವಿರ ರೂ. ಹೂಡಿಕೆ ಮಾಡುವಂತೆ ತಿಳಿಸಲಾಗಿತ್ತು.

ಅಂತೆಯೇ ಮಹಿಳೆ ಹಣ ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದ್ದಕ್ಕೆ ಅವರ ಖಾತೆಗೆ 17,366 ರೂ. ಬಂದಿತ್ತು. ಎರಡನೇ ಬಾರಿಗೆ 10 ಸಾವಿರ ರೂ. ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದ ಮಹಿಳೆ ಖಾತೆಗೆ 19,623 ರೂ. ಹಣ ಬಂದಿತ್ತು. ಮಹಿಳೆಗೆ ನಂಬಿಕೆ ಮೂಡಿಸಿದ ವಂಚಕರು ಕೊನೆಗೆ ವಿವಿಧ ಹಂತದಲ್ಲಿ 27 ಟಾಸ್ಕ್‌ಗಳನ್ನು ನೀಡಿ ನಾನಾ ಕಾರಣ ಕೊಟ್ಟು 53.17 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಕೊನೆಗೆ ಲಾಭಾಂಶವು ಇಲ್ಲದೆ, ಅಸಲು ಹಣ ಹಿಂತಿರುಗಿಸದೆ ವಂಚಿಸಿದ್ದಾರೆ. ವಂಚನೆಗೆ ಒಳಗಾಗಿರುವುದು ಅರಿತ ಮಹಿಳೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net