ಕಾಂಗ್ರೆಸ್ ಆಯ್ಕೆ ಮಾಡುವುದು ದುರ್ದೈವ

BAGINA
ಯಲಬುರ್ಗಾ ತಾಲೂಕಿನ ತರಲಕಟ್ಟಿ-ನಿಲೋಗಲ್ ಕೆರೆಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಮಂಗಳಬಾರ ಬಾಗಿನ ಅರ್ಪಿಸಿದರು. ಮುಖಂಡರಾದ ಶಿವನಾಗಯ್ಯ ಹಿರೇಮಠ, ವೀರಣ್ಣ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ್, ರಂಗನಾಥ ವಲ್ಮಕೊಂಡಿ, ಅಮರೇಶ ಹುಬ್ಬಳ್ಳಿ ಇದ್ದರು.
Published on

ಯಲಬುರ್ಗಾ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂಭತ್ತು ತಿಂಗಳಾದರೂ ಕ್ಷೇತ್ರದಲ್ಲಿ ಒಂದೂ ಕಾಮಗಾರಿಗೆ ಅಡಿಗಲ್ಲು ಹಾಕಿಲ್ಲ. ಜನರಿಗೆ ಹುಸಿ ಭರವಸೆ ನೀಡಿ ಜಾರಿಗೆ ತರಲಾದ ಗ್ಯಾರಂಟಿಗಳು ಅಧರ್ಂಬರ್ಧವಾಗಿವೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ತರಲಕಟ್ಟಿ-ನಿಲೋಗಲ್ ಗ್ರಾಮದ ಕೆರೆ ಅಂಗಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿರು.

ತುಂಗಭದ್ರಾ, ಆಲಮಟ್ಟಿ ಆಣೆಕಟ್ಟೆಯಲ್ಲಿ ನೀರು ಇದ್ದರೂ ಈ ಹಿಂದೆ ಆಡಳಿತ ನಡೆಸಿದವರು ಹಲವು ದಶಕಗಳಿಂದ ಕ್ಷೇತ್ರಕ್ಕೆ ನೀರು ತರಲು ಕಾಳಜಿ ವಹಿಸಲಿಲ್ಲ. ಕೆರೆ ತುಂಬಿಸುವ ಯೋಜನೆಯ ಸಂಕಲ್ಪ ತೊಟ್ಟು, 2013ರಲ್ಲಿ ಅಂದಿನ ಸಿಎಂ ಜಗದೀಶ ಶೆಟ್ಟರ್ ಕರೆತಂದು ಬಿಸ್ಕೀಂ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದರೆ, ಕಾಂಗ್ರೆಸ್ ನಾಯಕರು ಅಡ್ಡಗಲ್ಲೆಂದರು. ನನ್ನ ಐದು ವರ್ಷದ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡು, ಬಹುತೇಕ ಕೆರೆಗಳಿಗೆ ನೀರು ಬರುವಂತಾಯಿತು. ನಾವು ಮಾಡುವ ಕೆಲಸಕ್ಕೆ ಪ್ರೋತ್ಸಾಹ ನೀಡುವುದಿರಲಿ, ಸುಮ್ಮನೆ ಇರುವುದಕ್ಕೂ ಅವರಿಗೆ ಕಷ್ಟವಾಗಿತ್ತು ಎಂದು ಟೀಕಿಸಿದರು.

ಕಾಂಗ್ರೆಸ್‌ನವರಿಗೆ ರೈತರ ಕಾಳಜಿ, ಅಭಿವೃದ್ಧಿ ಬೇಕಿಲ್ಲ. ಅಧಿಕಾರ ಬೇಕು. ಅಡಿಗಲ್ಲಿಗೆ ಅಡ್ಡಗಲ್ಲು ಎಂದವರಿಗೆ ಏನೆನ್ನಬೇಕು. ಇವರ ಬುದ್ಧಿಯನ್ನು ಜನ ಇನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರದ ಜನಪರವಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ ಹೊರತು ನನ್ನ ಸ್ವಂತಕ್ಕಲ್ಲ. ಇದನ್ನು ಜನ ಅರ್ಥ ಮಾಡಿಕೊಳ್ಳಲಿಲ್ಲ. ನಾನು ಸೋತಿದ್ದು ಕೆಟ್ಟಗಳಿಗೆ ಎಂದು ಭಾವಿಸಿದ್ದೇನೆ. ಬಿಜೆಪಿ ಅವಧಿಯಲ್ಲಿ ಕ್ಷೇತ್ರದ ಕೆರೆಗಳಿಗೆ ನೀರು ಬಂದಿದೆ. ನೀವು ನಿಜವಾದ ಗಂಡಸರಾಗಿದ್ದರೆ, ನಿಮ್ಮ ಅವಧಿಯಲ್ಲಿ ರೈತರ ಜಮೀನುಗಳಿಗೆ ನೀರಾವರಿ ಮಾಡಿ ತೋರಿಸಿ ಎಂದು ಸವಾಲು ಹಾಕಿದರು.

ದೇಶದ ಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕಿದೆ. ಮುಂಬರುವ ಲೋಕಸಭೆ ಚುನಾವಣೆ ದೇಶದ ಭವಿಷ್ಯದ ಚುನಾವಣೆ. ನಾವೆಲ್ಲರೂ ನೆಮ್ಮದಿಯಿಂದ ಇರಲು ಮೋದಿ ಅವಶ್ಯಕತೆ ಇದೆ. ಕಾಂಗ್ರೆಸ್ ಕೇವಲ ಕುಟುಂಬ ರಾಜಕಾರಣ ಮಾಡಿದೆ. ತನ್ನ ಸ್ವಂತಕ್ಕೆ ಅಧಿಕಾರ ನಡೆಸಿದೆ ಹೊರತು ದೇಶದ ಅಭಿವೃದ್ಧಿಗಲ್ಲ. ಕಾಂಗ್ರೆಸ್ ಆಯ್ಕೆ ಮಾಡುವುದು ದುರ್ದೈವ.

ಗ್ರಾಮದ ಮುಖಂಡ ಶ್ರೀಕಾಂತಗೌಡ ಮಾಲಿಪಾಟೀಲ್ ಮಾತನಾಡಿ, ಮಾಜಿ ಶಾಸಕ ಲಿಂಗರಾಜ ದೇಸಾಯಿ ಅವಧಿಯಲ್ಲಿ ತರಲಕಟ್ಟಿ ಕೆರೆ ನಿರ್ಮಾಣವಾಯಿತು. ಇದು 97 ಎಕೆರೆ ವಿಸ್ತೀರ್ಣ ಹೊಂದಿದೆ. ಶಾಸಕ ರಾಯರಡ್ಡಿ 40 ವರ್ಷಗಳ ರಾಜಕಾರಣದಲ್ಲಿ ಯಾವುದೇ ಕೆರೆ ಅಭಿವೃದ್ಧಿ ಮಾಡಲಿಲ್ಲ. ಮಾಜಿ ಸಚಿವ ಹಾಲಪ್ಪ ಆಚಾರ್‌ರಿಂದ ಕೆರೆ ತುಂಬಿಸುವ ಯೋಜನೆ ಸಾಕಾರವಾಗಿದೆ. ಕಾಂಗ್ರೆಸ್‌ನವರು ನಾವು ಮಾಡಿದ್ದೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಸ್ಥಳೀಯ ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ್, ಶಂಕರ ಸಾಹುಕಾರ, ಹನುಮಂತಪ್ಪ ಕನಕಗಿರಿ, ಶರಣಪ್ಪ ಹೊಸ್ಕೇರಿ, ಶಂಕ್ರಪ್ಪ ಸುರಪುರ ಮಾತನಾಡಿದರು.

ಗ್ರಾಪಂ ಸದಸ್ಯರಾದ ಹುಸೇನ್‌ಬಿ ಅತ್ತಾರ, ಬಸಪ್ಪ ಕೋಳೂರು, ಪ್ರಮುಖರಾದ ಬಸಲಿಂಗಪ್ಪ ಭೂತೆ, ಶಂಕರಗೌಡ ಟಣಕನಕಲ್, ಶಿವಪ್ಪ ವಾದಿ, ಮಲ್ಲಿಕಾರ್ಜುನ ಹರ್ಲಾಪುರ, ರಾಚಪ್ಪ ಹುರಳಿ, ಪ್ರಭುಗೌಡ ಪಾಟೀಲ್, ಕಳಕಪ್ಪ ಕಂಬಳಿ, ರಂಗನಾಥ ವಲ್ಮಕೊಂಡಿ, ಫಕ್ಕೀರಪ್ಪ ತಳವಾರ್, ಅಮರೇಶ ಹುಬ್ಬಳ್ಳಿ, ಆನಂದ ಈಳಿಗೇರ, ಅಯ್ಯಪ್ಪ ಗುಳೇದ, ಹನುಮಂತಪ್ಪ ಭಾವಿಕಟ್ಟಿ, ಹನುಮರಡ್ಡಿ ವಡ್ರಕಲ್, ಈಶಪ್ಪ ಸಿದ್ದಾಪುರ, ಯಮನೂರಪ್ಪ ಬ್ಯಾಳಿ, ಶಂಕರ ಮೂಲಿ, ಭೀಮಜ್ಜ ಗುರಿಕಾರ, ಮಂಜು ಗಡಾದ, ಹುಚ್ಚಪ್ಪ ಮರಕಟ್, ಶಂಕರ ವಡ್ರಕಲ್, ನಾಗರಾಜ ಹಾಲಳ್ಳಿ ಇತರರಿದ್ದರು.

ಭೂಮಿ ಕಳೆದುಕೊಂಡ ಮಹಿಳೆಗೆ ಪರಿಹಾರ ಸಿಗಲಿ

ತರಲಕಟ್ಟಿ ಕೆರೆಗೆ ನೀರು ತುಂಬಿಸಿದ್ದರಿಂದ ನನಗೆ ಸೇರಿ 2 ಎಕರೆ ಭೂಮಿ ಮುಳುಗಡೆಯಾಗಿದೆ. ಬಿತ್ತನೆ ಮಾಡಲಾದ ಶೇಂಗಾ, ಮೆಕ್ಕೆಜೋಳ ನಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ನೀಡಿಲ್ಲ. ನೀವಾದರೂ ಹಣ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಮುಂದೆ ರೈತಮಹಿಳೆ ಪುತ್ರಮ್ಮ ರಾಮಣ್ಣ ಹರಿಜನ ಕಣ್ಣೀರಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಹಾಲಪ್ಪ ಆಚಾರ್, ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕು. ಕೆರೆಯಲ್ಲಿ ಮುಳುಗಡೆಯಾದ ಭೂಮಿ ಕಳೆದುಕೊಂಡ ರೈತ ಮಹಿಳೆಗೆ ಪರಿಹಾರ ಸಿಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net