ಮೈಸೂರು: ಸಮ ಸಮಾಜ ನಿರ್ಮಾಣ ಮಾಡಲು ಸಂವಿಧಾನದ ಧ್ವನಿ ಜನರ ಧ್ವನಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಗುರುವಾರ ಸಂವಿಧಾನ ದಿನದ ಪ್ರಯುಕ್ತ ಆಯೋಜಿಸಿದ್ದ ‘ಸಂವಿಧಾನ ಧ್ವನಿ ಜನರ ಧ್ವನಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮದು. ನಮ್ಮ ಸಂವಿಧಾನ ಎಷ್ಟೇ ಶ್ರೇಷ್ಠವಾಗಿರಬಹದು. ಆದರೆ ಸಂವಿಧಾನದ ಅನುಷ್ಠಾನ ಅಕಾರ ನಡೆಸುವವರ ಬದ್ಧತೆ ಮೇಲೆ ಅವಲಂಬನೆ ಆಗಿದೆ. ಬದ್ಧತೆ ಇಲ್ಲದ ಸರ್ಕಾರ ಇದ್ದರೆ ಸಂವಿಧಾನ ಆಶಯ ಈಡೇರಲು ಸಾಧ್ಯವಿಲ್ಲ. ಸಂವಿಧಾನದ ಆಶಯ ಸಂಪೂರ್ಣ ಜಾರಿಯಾಗಿಲ್ಲ. ಕೆಲವು ಆಶಯಗಳು ಮಾತ್ರ ಈಡೇರಿವೆ. ಹೀಗಾಗಿ ಸಂವಿಧಾನದ ಆಶಯಗಳನ್ನು ಜಾರಿಗೆ ತರುವವರನ್ನು ಜನರು ಬೆಂಬಲಿಸಬೇಕು ಎಂದರು.
ನಮ್ಮ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಸಮಾನತೆ ಇಲ್ಲದೆ ಸಮಾಜದಲ್ಲಿ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ‘ಅಸಮಾನತೆ ತೊಲಗಿಸದೆ ಇದ್ದರೆ ಅಸಮಾನತೆಗೆ ಸಿಲುಕಿದವರು ಒಂದಲ್ಲ ಒಂದು ದಿನ ರಾಜಕೀಯ ಪ್ರಭುತ್ವವನ್ನು ಧ್ವಂಸ ಮಾಡುತ್ತಾರೆ’ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಎಚ್ಚರಿಸಿದರು. ಹೀಗಾಗಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸಮಾನತೆ ನೀಡುವ ಕಡೆಗೆ ಸರ್ಕಾರಗಳು ಗಮನ ಹರಿಸಬೇಕು ಎಂದು ಹೇಳಿದರು.
ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಎಂದು ಸಾರ್ವಕರ್ ಟೀಕಿಸಿದ್ದರು. ಆರ್ಎಸ್ಎಸ್ ಸಂಸ್ಥಾಪಕ ಹೆಡಗೇವಾರ್ ಸಹ ಭಾರತದ ಸಂವಿಧಾನವನ್ನು ವಿರೋಧ ಮಾಡಿದ್ದರು. ನಾವು ಅಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದ. ಆದರೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮನುವಾದಿಗಳು ನಿರಂತರವಾಗಿ ಸಂವಿಧಾನವನ್ನು ವಿರೋಸಿಕೊಂಡು ಬಂದಿದ್ದಾರೆ. ಯಾರು ಸಂವಿಧಾನದ ಪರವಾಗಿ ಇದ್ದರೆ, ಯಾರು ವಿರೋಧವಾಗಿ ಇದ್ದಾರೆ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದು ಹೇಳಿದರು.
ಸಮಾನತೆಯನ್ನು ವಿರೋಧ ಮಾಡುವವರನ್ನು ಮೊದಲು ನಾವು ಗುರುತಿಸಬೇಕು ಮನುಸ್ಮತಿ ಪರವಾಗಿ ಯಾರು ಇದ್ದಾರೆ, ಸಂವಿಧಾನ ಪರವಾಗಿ ಯಾರು ಇದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಶೋಷಿತ ಸಮುದಾಯಗಳಿಗೆ ಸಮಾನ ಅವಕಾಶಗಳು ದೊರೆಯಬೇಕು. ಸಂವಿಧಾನದ ಆಶಯಗಳು ಜಾರಿಯಾದರೆ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುತ್ತದೆ ಎಂದರು.
ಕೇಂದ್ರ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತ ಡಾ.ಎಸ್.ವೈ. ಖುರೇಷಿ ಮಾತನಾಡಿ, ಬಡತನ, ಅನಕ್ಷರತೆ ಕಾರಣಕ್ಕಾಗಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ ಎಂದು ಜಾಗತಿಕ ನಾಯಕರು ದೇಶಕ್ಕೆ ಸ್ವಾತಂತ್ರ ಸಿಕ್ಕ ಸಂದರ್ಭ ಟೀಕಿಸಿದ್ದರು. ಆದರೆ ಎಲ್ಲರ ಟೀಕೆಗೆ ಉತ್ತರ ನೀಡುವ ರೀತಿಯಲ್ಲಿ ದೇಶದಲ್ಲಿಯಶಸ್ವಿಯಾಗಿ ಪ್ರಜಾಪ್ರಭುತ್ವ ಜಾರಿಯಾಯಿತು. ಈ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಲ್ಲರು ಶ್ರಮಿಸಬೇಕಾಗಿದೆ. ಸಾಕಷ್ಟು ಜನರು ಮತದಾನ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗೆ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಅಂಬೇಡ್ಕರ್ ಅವರು ಕರೆ ನೀಡಿದಂತೆ ರಾಜಕೀಯ ಶಕ್ತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಬೇಕಿದೆ. ನಮ್ಮ ಒಗ್ಗಟ್ಟನ್ನು ಒಡೆಯಲು ಪಟ್ಟಭದ್ರ ಹಿತಾಸಕ್ತಿಗಳು ನಿರಂತರ ಪ್ರಯತ್ನ ನಡೆಸುತ್ತಿರುತ್ತವೆ. ಇಂತಹ ಶಕ್ತಿಗಳ ವಿರುದ್ಧ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗಟ್ಟಿನಿಂದ ಹೋರಾಟ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಸಂವಿಧಾನವನ್ನು ಗೌರವಿಸುವ ಸಂದರ್ಭದಲ್ಲಿ ಎರಡು ರೀತಿಯ ಪ್ರವೃತ್ತಿಗಳು ಕಾಣಿಸುತ್ತಿವೆ. ಒಂದು ಕಡೆ ಸಂವಿಧಾನದ ಪುಸ್ತಕವನ್ನು ಎತ್ತಿಹಿಡಿದು ಪ್ರದರ್ಶಿಸಲಾಗುತ್ತಿದೆ. ಮತ್ತೊಂದು ಕಡೆ ಅದನ್ನು ಪೂಜಿಸಿ ನಮಸ್ಕರಿಸುವ ಮೂಲಕ ಧಾರ್ಮಿಕ ಆಚರಣೆಯ ರೂಪ ನೀಡಲಾಗುತ್ತಿದೆ. ಆದರೆ ಸಂವಿಧಾನ ಕೇವಲ ಪ್ರದರ್ಶನದ ವಸ್ತುವೂ ಅಲ್ಲ, ಪೂಜಾ ಸಾಮಗ್ರಿಯೂ ಅಲ್ಲ. ಅದರ ಆಶಯಗಳನ್ನು ಅರ್ಥಮಾಡಿಕೊಂಡು ಅನುಷ್ಠಾನಗೊಳಿಸುವುದೇ ನಿಜವಾದ ಗೌರವ ಎಂದು ಹೇಳಿದರು.
ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ ಮತ್ತು ಭಿನ್ನಾಭಿಪ್ರಾಯದ ಹಕ್ಕುಗಳಿಗೆ ಇಂದು ಸವಾಲುಗಳು ಎದುರಾಗುತ್ತಿವೆ. ಸರ್ಕಾರ ವನ್ನು ಟೀಕಿಸುವುದನ್ನೇ ದೇಶವನ್ನು ಟೀಕಿಸಿದಂತೆ ಬಿಂಬಿಸಿ, ಟೀಕಿಸುವವರನ್ನು ದೇಶದ್ರೋಹಿಗಳೆಂದು ಕರೆಯುವ ಪ್ರವೃತ್ತಿ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರ್ಕಾರದ ಟೀಕೆ ಮತ್ತು ದೇಶದ ಟೀಕೆ ಎರಡೂ ಒಂದೇ ಅಲ್ಲ. ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳುವ ಗುಣವೇ ನಿಜವಾದ ಪ್ರಜಾಪ್ರಭುತ್ವದ ಲಕ್ಷಣ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಯಥಾ ರಾಜ ತಥಾ ಪ್ರಜಾ ಎಂಬ ಕಾಲ ಹೊರಟು ಹೋಯಿತು. ಪ್ರಸ್ತುತ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕು ನಡೆಸುತ್ತಿದ್ದೇವೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತವನ್ನು ನಡೆಸುವವರು (ರಾಜ) ಕೆಟ್ಟರೆ ಪ್ರಜೆ ಛಾಟಿ ಬೀಸಬೇಕು. ಇಲ್ಲವಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸಲು ಒಂದು ವರ್ಷ ನಿರಂತರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು, ಡಿ.ಜಿ.ಸಾಗರ್, ಅಣ್ಣಯ್ಯ, ಮುನಿಸ್ವಾಮಿ, ಬೆಟ್ಟಯ್ಯಕೋಟೆ, ಪುರುಷೋತ್ತಮ್, ರಘುಪತಿ, ಪೂರ್ಣಾನಂದ, ಹರಿಹರ ಆನಂದಸ್ವಾಮಿ, ಸುಮನಾ, ದೇವಗಳ್ಳಿ ಸೋಮಶೇಖರ್, ನಾಗರಾಜ್, ಭಾಸ್ಕರ್, ರೈತ ಮುಖಂಡ ಹೊಸಕೋಟೆ ಬಸವರಾಜ್ ಹಾಗೂ ಇತರರು ಇದ್ದರು.
ಮಹದೇವಪ್ಪ ಮುಂದಿನ ಅಹಿಂದ ನಾಯಕ
ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯ ಎದುರೇ ಮಹದೇವಪ್ಪ ಅವರು ಮುಂದಿನ ಅಹಿಂದ ನಾಯಕರಾಗಬೇಕು ಎಂದು ಜನರು ಒತ್ತಾಯಿಸಿದ ಘಟನೆ ನಡೆಯಿತು. ಈ ಕುರಿತು ಪ್ರತಿಕ್ರಿಯಿಸಿದ ಮಹದೇವಪ್ಪ, ಎಲ್ಲರೂ ಜತೆಯಾಗಿ ಹೋಗೋಣ ಈಗ ಸುಮ್ಮನಿರಿ ಎಂದು ವಿನಂತಿಸಿದರು.
ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ-ಮಹದೇವಪ್ಪ
ಸಚಿವ ಸಂಪುಟ ಮರು ರಚನೆಯ ನಂತರ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಡಾ.ಎಚ್.ಸಿ. ಮಹದೇವಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಂಡಿದ್ದರು. ಯಾವುದೇ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿರಲಿಲ್ಲ. ಆದರೆ, ಹಲವು ತಿಂಗಳ ನಂತರ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಶಕ್ತಿ ಪ್ರದರ್ಶನ ಕಾರ್ಯಕ್ರಮವಲ್ಲ
ಸಂವಿಧಾನ ದಿನದ ಪ್ರಯುಕ್ತ ಆಯೋಜಿಸಿರುವ ‘ಸಂವಿಧಾನ ಧ್ವನಿ ಜನರ ಧ್ವನಿ’ ಕಾರ್ಯಕ್ರಮದ ಬಗ್ಗೆ ಕೆಲವು ತಪ್ಪು ಸಂದೇಶಗಳು ರವಾನೆಯಾಗಿತ್ತು. ರಾಜಕೀಯವಾಗಿ ಬೇರೆ ಬೇರೆ ಅರ್ಥಗಳು ಸೃಷ್ಟಿಯಾಯಿತು. ದೇಶದ ವಿವಿಧ ರಂಗದ ತಜ್ಞರನ್ನು ಕರೆಯಿಸಿ 2 ದಿನದ ಕಾರ್ಯಕ್ರಮ ನಡೆಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಅರ್ಥ ನೀಡಲಾಯಿತು. ಸಂವಿಧಾನದ ವಿಷಯದಲ್ಲಿ ಜಿಜ್ಞಾಸೆ ಬೇಡ. ಇದು ಸವಾಲು ಅಲ್ಲ, ಶಕ್ತಿಯ ಪ್ರರ್ದನ ಅಲ್ಲ, ಪ್ರತಿಷ್ಠೆಯೂ ಅಲ್ಲ. ಎಲ್ಲರನ್ನು ಒಳಗೊಳ್ಳುವ ಕಾರ್ಯಕ್ರಮವಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.