

ತುಮಕೂರು: ಬಡವರ ಅನ್ನ ಕಸಿಯಲು ತೂಕದಲ್ಲಿ ವಂಚನೆ ಮಾಡುವುದಾಗಲಿ, ಪಡಿತರದಾರರಿಂದ ಹಣ ಪಡೆಯುವುದಾಗಲಿ ಕಂಡುಬಂದಲ್ಲಿ ಅಂತಹ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ಗುಡುಗಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 19 ಸಾವಿರ ನ್ಯಾಯಬೆಲೆ ಅಂಗಡಿಗಳಿವೆ. ಪ್ರತಿದಿನ 2 ಜಿಲ್ಲೆಗೆ ಭೇಟಿ ನೀಡಿ ಪಡಿತರ ವಿತರಣೆ ಪರಿಶೀಲಿಸುತ್ತಿದ್ದೇನೆ ಎಂದರು.
ಕರೊನಾದಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದ್ದು ಜನರಿಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡುವುದು ಕರ್ತವ್ಯ. ಬಡವರಿಗೆ ತೊಂದರೆಯಾಗದಂತೆ ಪಡಿತರ ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿತರಣೆಯಲ್ಲಿನ ಲೋಪಗಳ ಬಗ್ಗೆ ಅಂಗಡಿಗಳ ವಿರುದ್ಧ ಪ್ರತೀ ದಿನ ದೂರುಗಳು ಬರುತ್ತಿವೆ. ದೂರು ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ಕೂಲಿಗಾಗಿ ಬೇರೆ ಜಿಲ್ಲೆ, ಹೊರ ರಾಜ್ಯದಿಂದ ಬಂದಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಆಹಾರ ಒದಗಿಸಲಾಗುತ್ತಿದೆ ಎಂದರು.
3 ತಿಂಗಳಿಗಾಗುವಷ್ಟು ಪಡಿತರ: ಕೇಂದ್ರ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 3 ತಿಂಗಳಿಗೆ ಆಗುವಷ್ಟು ಪಡಿತರ ಒದಗಿಸಲಾಗುತ್ತಿದ್ದು, ದಾಸ್ತಾನು ಮಾಡಲಾಗುತ್ತಿದೆ. ಅಲ್ಲದೇ ಉಜ್ವಲ ಯೋಜನೆ ಸೌಲಭ್ಯ ಪಡೆದುಕೊಂಡಿರುವ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಒದಗಿಸಲಾಗುವುದು. ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಪಡಿತರವನ್ನು ಏ.25ರೊಳಗೆ ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ ಎಂದು ಗೋಪಾಲಯ್ಯ ಹೇಳಿದರು.
ಸರ್ಕಾರದಿಂದ ವಿತರಿಸುವ ಪಡಿತರ ಧಾನ್ಯಗಳಿಗೆ ಹಣ ಪಾವತಿಸುವಂತಿಲ್ಲ. ಯಾರಿಂದಲೂ ಹಣ ಪಡೆಯಬಾರದೆಂದು ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಅಂಥವರ ಪರವಾನಗಿಯನ್ನು ಶಾಶ್ವತವಾಗಿ ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಡಿತರ ಚೀಟಿ ಹೊಂದದೆ ಇರುವವರಿಗೂ 2 ತಿಂಗಳ ಪಡಿತರ ನೀಡಲು ಮುಖ್ಯಮಂತ್ರಿ ತೀರ್ಮಾನ ಕೈಗೊಂಡಿದ್ದಾರೆ ಎಂದರು.
ಲಾಕ್‌ಡೌನ್ ಸಂದರ್ಭದಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅಂಗಡಿ ತೆರೆದು ಪಡಿತರ ವಿತರಿಸಬೇಕು. ಅಲ್ಲದೇ ನ್ಯಾಯಬೆಲೆ ಅಂಗಡಿಗಳಿಂದ 3 ಕಿ.ಮೀ.,ಗಿಂತ ದೂರದ ಅಂತರವಿರುವ ಹಳ್ಳಿಗಳಿಗೆ ಅಂಗಡಿ ಮಾಲೀಕರೇ ಗಾಡಿಗಳ ಮೂಲಕ ತೆಗೆದುಕೊಂಡು ಹೋಗಿ ಸ್ಥಳದಲ್ಲಿಯೇ ತೂಕ ಮಾಡಿ ಪಡಿತರ ವಿತರಣೆ ಮಾಡಬೇಕು. ಸಮರ್ಪಕವಾಗಿ ಪಡಿತರ ವಿತರಣೆಯಾಗುತ್ತಿರುವ ಬಗ್ಗೆ ತಹಸೀಲ್ದಾರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳು ಪ್ರತೀ ದಿನ ಒಂದೊಂದು ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಮಾತನಾಡಿ, ಜಿಲ್ಲೆಯಲ್ಲಿ ಶೇ.53 ಪಡಿತರ ವಿತರಣೆ ಮಾಡಲಾಗಿದ್ದು, ಪಡಿತರ ಧಾನ್ಯ ವಿತರಣೆ ಮಾಡದ ಚಿಕ್ಕಪೇಟೆ ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸಂಸದ ಜಿ.ಎಸ್.ಬಸವರಾಜು, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಇದ್ದರು.
ಅನ್ನದಾಸೋಹ ಕೇಂದ್ರಕ್ಕೆ ಸಚಿವ ಭೇಟಿ!: ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಬಳಿಕ ಆಹಾರ ಇಲಾಖೆ ಸಚಿವ ಕೆ.ಗೋಪಾಲಯ್ಯ ಅವರು, ನಗರ ವೀರಶೈವ ಸಮಾಜದ ವತಿಯಿಂದ ಜೆ.ಸಿ.ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಿರ್ಗತಿಕರಿಗೆ ತೆರೆದಿರುವ ಅನ್ನ ದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರ್.ವಿ ಕಾಲನಿಯ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಧಾನ್ಯವನ್ನು ಸರಿಯಾಗಿ ತೂಕ ಮತ್ತು ಅಳತೆ ಮಾಡಿ ವಿತರಿಸಲಾಗುತ್ತಿರುವ ಬಗ್ಗೆ ಪಡಿತರ ಚೀಟಿದಾರರಿಂದ ಮಾಹಿತಿ ಪಡೆದರು. ಬಳಿಕ ಸಚಿವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು.
ಅನುದಾನದ ಕೊರತೆ ಇಲ್ಲ: ಜಿಲ್ಲೆಯಲ್ಲಿ ಗುರುತಿಸಿರುವ ಬರಪೀಡಿತ ತಾಲೂಕುಗಳಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಆಯಾ ತಾಲೂಕುಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು. ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ತೊಂದರೆ ಆಗದಂತೆ ರಿಯಾಯಿತಿ ನೀಡಲಾಗಿದ್ದು, ಜಿಲ್ಲೆಯ 300 ರಸಗೊಬ್ಬರದ ಅಂಗಡಿ, ಕೃಷಿ ಪರಿಕರದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಸಚಿವರ ಗಮನಕ್ಕೆ ತಂದರು.