

ಅಂಕೋಲಾ: ತಾಲೂಕಿನ ಬೊಗ್ರಿಬೈಲಿನ ಘನತ್ಯಾಜ್ಯ ಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ತ್ಯಾಜ್ಯ ವಿಲೇವಾರಿ ಘಟಕದ ಕೆಲ ಬಿಡಿಭಾಗಗಳು ಹಾನಿಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕಸ ವಿಂಗಡಣೆ ನಿರ್ಮಾಣ ಘಟಕದ ಟ್ರಾಮವೆಲ್ ಜೋಡಣೆ ಸಂದರ್ಭದಲ್ಲಿ ವೆಲ್ಡಿಂಗ್ ಮಾಡುವಾಗ ಬೆಂಕಿಯ ಕಿಡಿ ಹತ್ತಿರದಲ್ಲಿದ್ದ ಹುಲ್ಲುಗಳಿಗೆ ಹೊತ್ತಿಕೊಂಡು ಡಂಪಿಂಗ್ ಯಾರ್ಡ್ಗೆ ಪಸರಿಸಿ, ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರೂ ಸಂಪೂರ್ಣ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ವ್ಯಾಪಕವಾಗಿ ಹೊತ್ತಿಕೊಂಡ ಬೆಂಕಿ ಸಮೀಪದ ನೂರಾರು ಮನೆ ಹಾಗೂ ಹತ್ತಿರಲ್ಲಿದ್ದ 110 ಕೆ.ವಿ. ವಿದ್ಯುತ್ ಘಟದ ಸ್ಥಾವರಕ್ಕೆ ತಗಲುವ ಅಪಾಯವಿತ್ತು. ಆದರೆ, ಅಗ್ನಿಶಾಮಕದವರ ಮುನ್ನೆಚ್ಚರಿಕೆ ಕ್ರಮದಿಂದಾಗಿ ದೊಡ್ಡ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ.
ಅಗ್ನಿ ಶಾಮಕ ಸಿಬ್ಬಂದಿ ಜತೆ ಪುರಸಭೆ ಅಧ್ಯಕ್ಷ ಸೂರಜ ಎಂ. ನಾಯ್ಕ, ಮುಖ್ಯಾಧಿಕಾರಿ ಎಚ್. ಅಕ್ಷತಾ, ಸದಸ್ಯರಾದ ರೇಖಾ ಗಾಂವಕರ, ಕಾರ್ತಿಕ ನಾಯ್ಕ ಮುಂತಾದವರು ಇದ್ದರು.
ಬೊಗ್ರಿಬೈಲಿನ ಘನತ್ಯಾಜ್ಯ ಘಟಕದ ಸಮೀಪದ ಡಂಪಿಂಗ್ ಯಾರ್ಡ್ ಸ್ಥಳದಲ್ಲಿ ಆಗಾಗ ಬೆಂಕಿ ಸಂಭವಿಸುತ್ತಲೇ ಇರುತ್ತದೆ. ಟ್ರಾಮವೆಲ್ ಘಟಕದ ಜೋಡಿಸುವ ಕಾರ್ಯ ನಡೆಯುತ್ತಿದೆ. ಕಸ ವಿಂಗಡಣೆಗೆ ಬೇಕಾದ ಈ ಘಟಕದ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು. | ಎಚ್. ಅಕ್ಷತಾ, ಮುಖ್ಯಾಧಿಕಾರಿ ಪುರಸಭೆ ಅಂಕೋಲಾ