

ವಿಜಯಪುರ: ಭೂಮಿಯ ಉತ್ಪಾದನೆ ಸಾಮರ್ಥ್ಯ ಕುಂಠಿತಗೊಳ್ಳುತ್ತಿರುವ ಹಿನ್ನೆಲೆ ಸಾವಯವ ಕೃಷಿಗೆ ವಿಶೇಷ ಸ್ಥಾನ ಸಿಗುತ್ತಿದೆ ಎಂದು ಧಾರವಾಡ ಕೃಷಿ ವಿವಿಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ಜಿಲ್ಲೆಯ ತದ್ದೇವಾಡಿಯಲ್ಲಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಇಂಡಿ, ಕೃಷಿ ಇಲಾಖೆ (ಆತ್ಮಾ) ಹಾಗೂ ಗುರುಚಂದ್ರಶೇಖರ ಸಂಸ್ಥಾನ ಹಿರೇಮಠದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸಂಜೆ ನಡೆದ ‘ಸಾವಯವ ಕೃಷಿ ಚಿಂತನಾ ಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.
ರಾಸಾಯನಿಕ ಗೊಬ್ಬರಗಳನ್ನು ತಡೆದು ಸಾವಯವ ಗೊಬ್ಬರವನ್ನು ಸಮರ್ಪಕವಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಲಿದೆ. ಇದರಿಂದ ಅಧಿಕ ಇಳುವರಿಯ ಜೊತೆಗೆ ಮಾನವನ ಆರೋಗ್ಯಕ್ಕೂ ಉತ್ತಮ ಆಹಾರ ಲಭ್ಯವಾಗಲಿದೆ ಎಂದರು.
ಹಿಂದಿನ ಜೀವನಾಂಶ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಲ್ಲದೆ, ಮಿಶ್ರ ಬೆಳೆ, ಪರ್ಯಾಯ ಬೆಳೆಗಳು ಹಾಗೂ ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆಯಿಲ್ಲದ ಬೇಸಾಯಗಳನ್ನು ನಡೆಸಿಕೊಂಡು ಬಂದು, ಭೂಮಿಯ ಆರೋಗ್ಯವನ್ನು ಸಹ ಕಾಪಾಡಿಕೊಂಡು ಬರಲಾಗುತ್ತಿತ್ತು. ಆದರೆ, ಹಸಿರು ಕ್ರಾಂತಿಯ ಪರಿಣಾಮವಾಗಿ ರಸಗೊಬ್ಬರಗಳು ಮತ್ತು ರಾಸಾಯನಿಕಗಳು ಮಹತ್ತರ ಪಾತ್ರವಹಿಸುತ್ತಾ ಬಂದಿವೆ. ಆದರೆ ಇವುಗಳ ಬಳಕೆಯಿಂದ ಮಣ್ಣು, ನೀರು ಮತ್ತು ಪರಿಸರ ಮಾಲಿನ್ಯತೆ ಹೆಚ್ಚಿ, ಕ್ರಮೇಣ ಮನುಷ್ಯನ ಆರೋಗ್ಯಕ್ಕೂ ಧಕ್ಕೆ ಬರುತ್ತಿದೆ. ಇವುಗಳಲ್ಲದೇ ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರಗಳ ಬೆಲೆಯೂ ಕೃಷಿಕರನ್ನು ಚಿಂತೆಗೀಡು ಮಾಡಿದೆ. ಇಂಥ ಹೊತ್ತಲ್ಲಿ ಸಾವಯವ ಕೃಷಿಯು ಒಂದು ಆಶಾದಾಯಕ ದಾರಿಯಾಗಿದೆ ಎಂದರು.
ದಿವ್ಯ ಸಾನ್ನಿದ್ಯ ವಹಿಸಿದ್ದ ಮಹಾಂತೇಶ ಹಿರೇಮಠ ಮಾತನಾಡಿ, ಆಧುನಿಕ ಕೃಷಿ ಪದ್ಧತಿಯಿಂದ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸುವುದಲ್ಲದೆ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಂಡಿದೆ. ಇಂದು ರಾಸಾಯನಿಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಸಾವಯವ ಕೃಷಿ ಪದ್ಧತಿ ಅಗತ್ಯ ಮತ್ತು ಅನಿವಾರ್ಯ ಎಂದರು.
ವಿಜ್ಞಾನಿ ಡಾ. ಪ್ರಕಾಶ ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸಾವಯವ ಕೃಷಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ಒಂದು ದಶಕದಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಈಗಿನ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಹೊಂದುವ ಅವಶ್ಯಕತೆ ಇದ್ದು, ರೈತರು ಪ್ರತಿಯೊಂದು ಹಂತದಲ್ಲಿ ಉತ್ಪಾದನಾ ಖರ್ಚನ್ನು ಕಡಿಮೆ ಮಾಡಿ, ಪರಿಸರವನ್ನು ಸಂರಕ್ಷಿಸಿ, ಗುಣಮಟ್ಟದ ಆಹಾರವನ್ನು ಉತ್ಪಾದಿಸಬೇಕಾಗಿದೆ, ಈ ನಿಟ್ಟಿನಲ್ಲಿ ಸಾವಯವ ಕೃಷಿಯು ಒಂದು ಹೊಸ ಆಶಾ ಕಿರಣವಾಗಿ ಅಭಿವೃದ್ದಿ ಹೊಂದುತ್ತಿದೆ ಎಂದು ಹೇಳಿದರು.
ಕೃಷಿ ಅಧಿಕಾರಿ ದಾನಪ್ಪ ಕತ್ನಳ್ಳಿ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿದರು. ನಂತರದ ಗೋಷ್ಠಿಯಲ್ಲಿ ಡಾ. ಪ್ರಕಾಶ ಜಿ ಅವರು ಸಾವಯವ ಕೃಷಿಯಲ್ಲಿ ಬೀಜಾಮೃತ, ಜೀವಾಮೃತ, ಕೃಷಿ ಬೆಳೆಗಳ ಹೊದಿಕೆಯ ಮಹತ್ವ, ಹಸಿರಲೆ ಗೊಬ್ಬರ, ಅಂತರ ಬೆಳೆ, ಮಿಶ್ರ ಬೆಳೆಗಳ ಕುರಿತು ಮಾಹಿತಿ ಒದಗಿಸಿದರು. ಡಾ. ಪ್ರೇಮ್‌ಚಂದ್ ಯು, ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ, ಡಾ. ಬಾಲಾಜಿ ನಾಯಕ ಅವರು ಸಾವಯವ ಕೃಷಿಯಲ್ಲಿ ಸಾವಯವ ಇಂಗಾಲ ಹಾಗೂ ಮಣ್ಣಿನ ಫಲವತ್ತತೆ, ಡಾ. ಪ್ರಸಾದ ಎಂ. ಜಿ ಅವರು ಸಾವಯವ ಕೃಷಿಯಲ್ಲಿ ಜಾನುವಾರು ಪಾಲನೆ, ಎರೆಗೊಬ್ಬರ ತಯಾರಿಕೆ ಕುರಿತು ಉಪನ್ಯಾಸ ನೀಡಿದರು. ಭತಗುಣಕಿ ಗ್ರಾಮದ ಪ್ರಗತಿಪರ ರೈತ ಮುದ್ದುಗೌಡ ಪಾಟೀಲ್ ಅನುಭವ ಹಂಚಿಕೊಂಡರು. ವಿವಿಧ ಭಾಗಗಳ 120 ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.