ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ರೈತ ಸಂಘ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಮೈಸೂರು ನಗರದಲ್ಲಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಮೈಸೂರು ನಗರದಲ್ಲಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
Published on: 

ಮೈಸೂರು: ರೈತರಿಗೆ ಎಕರೆಗೆ 50 ಸಾವಿರ ರೂ. ಬರ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ನಗರದ ಸಿದ್ಧಾರ್ಥನಗರದ ಸಿದ್ಧಾರ್ಥ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು. ಪ್ರತಿ ಪಂಚಾಯಿತಿಗೆ ಒಂದರಂತೆ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರಿಗೆ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಒದಗಿಸಬೇಕು ಎಂದು ಆಗ್ರಹಿಸಿದರು.

ಕಬಿನಿ, ಕಾವೇರಿ ನದಿ ಪಾತ್ರದ ಕೆರೆಕಟ್ಟೆಗಳನ್ನು ತುಂಬಿಸಬೇಕು. ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ನಾಲೆಗಳ ಮೂಲಕ ಸ್ಥಳೀಯ ರೈತರ ಬೆಳೆಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.

ಅವೈಜ್ಞಾನಿಕ ಕಸ್ತೂರಿರಂಗನ್ ವರದಿಯಿಂದ ಜನವಸತಿ ಹಾಗೂ ಕೃಷಿ ಭೂಮಿಯನ್ನು ಹೊರಗಿಡಬೇಕು. ಕಾಡಂಚಿನ ರೈತರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ಜಂಟಿ ಸರ್ವೇ ನಡೆಸಿ ಸಾಗುವಳಿ ಮಂಜೂರು ಮಾಡಬೇಕು. ಮಾನವವನ್ಯಜೀವಿ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕನಿಷ್ಠ 50 ಲಕ್ಷ ರೂ. ಹಾಗೂ ಜಾನುವಾರು ಹಾನಿಗೆ 1 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸರ್ಫೇಸಿ ಕಾಯ್ದೆ ರದ್ದುಪಡಿಸಬೇಕು, ಎಪಿಎಂಸಿ, ಭೂ ಸುಧಾರಣೆ ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕಬ್ಬಿಗೆ ಟನ್‌ಗೆ ಕನಿಷ್ಠ 5 ಸಾವಿರ ರೂ. ದರ ನಿಗದಿಪಡಿಸಬೇಕು. ಸ್ವಾಮಿನಾಥನ್‌ವರದಿ ಜಾರಿಗೊಳಿಸಬೇಕು, ನಂಜನಗೂಡು ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬಿಟ್ಟುಹೋದ ಗ್ರಾಮಗಳಿಗೆ ತಕ್ಷಣ ನೀರು ಪೂರೈಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ನಾಗನಹಳ್ಳಿ ವಿಜೇಂದ್ರ, ನಟರಾಜು, ಲೋಕೇಶ್, ಅಂಕಪ್ಪ, ಪರಮೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net