ಬಳಲಿದ ಮಹೇಂದ್ರ ಆನೆ : ಮರದ ಅಂಬಾರಿ ತಾಲೀಮು ಅರ್ಧಕ್ಕೆ ಮೊಟಕು

ಮರದ ಅಂಬಾರಿ ಹೊತ್ತು ಸಾಗಲು ನಿರಾಕರಿಸಿ ನಿಂತ ಮಹೇಂದ್ರ ಆನೆ.
ಮರದ ಅಂಬಾರಿ ಹೊತ್ತು ಸಾಗಲು ನಿರಾಕರಿಸಿ ನಿಂತ ಮಹೇಂದ್ರ ಆನೆ.
Published on: 

ಮೈಸೂರು: ದಸರಾ ಜಂಬೂ ಸವಾರಿಗೆ ಗಜಪಡೆಯನ್ನು ಸಜ್ಜುಗೊಳಿಸುವ ತಾಲೀಮಿನ ವೇಳೆ ಮರದ ಅಂಬಾರಿ ಹೊತ್ತು ಸಾಗುತ್ತಿದ್ದ ಮಹೇಂದ್ರ ಆನೆಗೆ ತೀವ್ರ ಬಳಲಿಕೆ ಉಂಟಾಗಿ ಮುಂದೆ ಸಾಗಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಗುರುವಾರ ತಾಲೀಮನ್ನು ಅರ್ಧಕ್ಕೆ ಸ್ಥಗಿತಗೊಳಿಸ ಲಾಯಿತು.

ನಗರದ ಸಯ್ಯಜಿರಾವ್ ರಸ್ತೆಯ ಆಯುರ್ವೇದ ಆಸ್ಪತ್ರೆ ವೃತ್ತದ ಬಳಿ ಈ ಘಟನೆ ನಡೆದಿದ್ದು, ಮರದ ಅಂಬಾರಿ ಹೊತ್ತು ಸಾಗುತ್ತಿದ್ದ ಮಹೇಂದ್ರ ಆನೆ ಏಕಾಏಕಿ ಮುಂದೆ ಸಾಗದೆ ನಿಂತಲ್ಲೇ ನಿಂತಿತು. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾ ಯಿತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ಸ್ಥಳದಲ್ಲಿದ್ದವರು ಕುತೂಹಲದಿಂದ ಈ ದೃಶ್ಯವನ್ನು ವೀಕ್ಷಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಹೇಂದ್ರನಿಗೆ ಹೊರಿಸಲಾಗಿದ್ದ ಭಾರದ ಮೂಟೆ ಹಾಗೂ ಕಟ್ಟಲಾಗಿದ್ದ ಮರದ ಅಂಬಾರಿಯನ್ನು ಸುರಕ್ಷಿತ ವಾಗಿ ಕೆಳಗಿಳಿಸಲಾಯಿತು. ಬಳಿಕ ಮರದ ಅಂಬಾರಿಯನ್ನು ಲಗೇಜ್ ಆಟೋ ಮೂಲಕ ಅರಮನೆಗೆ ಕಳುಹಿಸಲಾಯಿತು.

ಮಹೇಂದ್ರನಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ ಸಿಬ್ಬಂದಿ, ಆತನನ್ನು ಆಯುರ್ವೇದ ಆಸ್ಪತ್ರೆ ವೃತ್ತದಿಂದ ಅರಮನೆ ಆವರಣದ ಬಿಡಾರಕ್ಕೆ ವಾಪಸ್ ಕರೆತಂದರು. ಇದರೊಂದಿಗೆ ಇಂದಿನ ಮರದ ಅಂಬಾರಿ ಹೊರುವ ತಾಲೀಮು ಸ್ಥಗಿತಗೊಂಡಿತು.

ಅಸ್ವಸ್ಥತೆಯ ಲಕ್ಷಣ:

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ, ಗಜಪಡೆಯ ತಾಲೀಮಿನ ಭಾಗವಾಗಿ ಮರದ ಅಂಬಾರಿ ಹೊತ್ತು ಸಾಗುವ ರಿಹರ್ಸಲ್ ನಡೆಸಲಾಗುತ್ತಿತ್ತು. ಅರಮನೆ ಆವರಣದಿಂದ ಅಂಬಾರಿ ಹೊತ್ತು ಹೊರಟ ಮಹೇಂದ್ರ ಆಯುರ್ವೇದ ವೃತ್ತದವರೆಗೆ ಯಾವುದೇ ತೊಂದರೆಯಿಲ್ಲದೆ ಸಾಗಿತ್ತು. ಆದರೆ, ಅಲ್ಲಿಗೆ ತಲುಪಿದ ಬಳಿಕ ಮುಂದೆ ಸಾಗಲು ನಿರಾಕರಿಸಿತು. ಆತನಲ್ಲಿ ಅಸ್ವಸ್ಥತೆಯ ಲಕ್ಷಣವೂ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮರದ ಅಂಬಾರಿಯನ್ನು ಕೆಳಗಿಳಿಸಿ, ಮಹೇಂದ್ರನನ್ನು ವಾಪಸ್ ಅರಮನೆ ಬಿಡಾರಕ್ಕೆ ಕರೆತರಲಾಯಿತು ಎಂದು ತಿಳಿಸಿದರು.

ಅಂಬಾರಿ ಹೊರಲು ಹಿಂದೇಟು:

ಮರದ ಅಂಬಾರಿ ಹೊರುವ ಮೊದಲ ದಿನದ ತಾಲೀಮು ಸಂದರ್ಭದಲ್ಲಿಯೂ ಮಹೇಂದ್ರ ಅಂಬಾರಿ ಹೊರಲು ಹಿಂದೇಟು ಹಾಕಿದ್ದ. ಅಂದು ಭಾರಿ ಮಳೆಯ ನಡುವೆ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ಞರಮನೆ ಆವರಣದ ಬಲರಾಮ ಧ್ವಾರದವರೆಗೆ ಭಾರ ಹೊರಲು ಸಾಧ್ಯವಾಯಿತು. ಮಳೆಯ ಕಾರಣದಿಂದ ಭಾರ ಹೊರಲು ಸಾಧ್ಯವಾಗಿಲ್ಲ ಎಂದು ಎಲ್ಲರು ಭಾವಿಸಿದ್ದರು. ಆದರೆ, ಇದೀಗ ಮಳೆ ಇಲ್ಲದೆ ಇದ್ದರೂ ಮಹೇಂದ್ರನಿಗೆ ಭಾರ ಹೊರಲು ಸಾಧ್ಯವಾಗುತ್ತಿಲ್ಲ. ಈ ಮೂಲಕ ಅಂಬಾರಿ ಹೊರುವ ರೇಸ್‌ನಿಂದ ಮಹೇಂದ್ರ ಹೊರಬಿದ್ದಿದ್ದಾನೆ.

ಮಹೇಂದ್ರ ಆನೆಯು ಶ್ರೀರಂಗಪಟ್ಟಣದಲ್ಲಿ ಅಂಬಾರಿ ಹೊತ್ತು ಸಾಗಿರುವ ಅನುಭವ ಹೊಂದಿದೆ. ಹೀಗಾಗಿ ದಸರಾ ಗಜಪಡೆಯ ಪ್ರಮುಖ ಆನೆಗಳ ಪೈಕಿ ಒಂದಾಗಿರುವ ಮಹೇಂದ್ರನಿಂದ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ನಿರೀಕ್ಷೆ ಇತ್ತು. ಆದರೆ, ಪ್ರಸಕ್ತ ಸಾಲಿನ ತಾಲೀಮಿನಲ್ಲಿ ಎದುರಾಗಿರುವ ಸಮಸ್ಯೆ ಇದೀಗ ಅರಣ್ಯ ಇಲಾಖೆ ಹಾಗೂ ಗಜಪಡೆಯ ಸಿಬ್ಬಂದಿಗೆ ಹೊಸ ಸವಾಲು ತಂದಿದೆ.

ಘಟನೆಯ ವೇಳೆ ಮಹೇಂದ್ರ ವಿಚಲಿತಗೊಂಡಿದ್ದರಿಂದ ಸ್ಥಳದಲ್ಲಿದ್ದ ಸಾರ್ವಜನಿಕರಲ್ಲಿಯೂ ಕೆಲಕಾಲ ಆತಂಕ ಮನೆಮಾಡಿತ್ತು. ಆದರೆ, ಸಿಬ್ಬಂದಿ ತಕ್ಷಣವೇ ಅಂಬಾರಿ ಹಾಗೂ ಭಾರವನ್ನು ತೆರವುಗೊಳಿಸಿ ಆನೆಯನ್ನು ಸುರಕ್ಷಿತವಾಗಿ ವಾಪಸ್ ಕರೆದೊಯ್ದರು. ಯಾವುದೇ ಅನಾಹುತ ಸಂಭವಿಸದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಮಹೇಂದ್ರ ಮುಂದೆ ಸಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮರದ ಅಂಬಾರಿ ಹೊರುವ ತಾಲೀಮು ರದ್ದುಗೊಂಡಿದ್ದು, ಗಜಪಡೆಯ ಉಳಿದ ಆನೆಗಳ ತಾಲೀಮಿನ ಮೇಲೂ ಇದರ ಪರಿಣಾಮ ಬೀರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net