

ಬಾದಾಮಿ: ಸಹಕಾರಿ ಸಂಘಗಳು ರೈತರಿಗೆ ಸಾಲ ಕೊಡುವುದರ ಜತೆಗೆ ಎಲ್ಲ ಸೌಲಭ್ಯ ತಲುಪಿಸಿ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ, ಕಾರ್ಯಾಲಯದ ನೂತನ ಕಟ್ಟಡ ಹಾಗೂ ಗೋದಾಮು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದುಡಿಯುವ ಕೈಗಳಿಗೆ ಸಹಾಯ ಮಾಡೋಣ. ಸಂಘದ ನಿರ್ದೇಶಕರು, ಸಿಬ್ಬಂದಿ ಉತ್ತಮ ಸೇವೆ ಒದಗಿಸಿ ಜನರ ವಿಶ್ವಾಸ ಗಳಿಸಬೇಕು ಎಂದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, 1.70ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಗೋದಾಮು ನಿರ್ಮಾಣ ಮಾಡಿದ್ದು ಹೆಮ್ಮೆಯ ವಿಷಯ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸದೆ ಸಂಘದ ಅಭಿವೃದ್ಧಿಯತ್ತ ಗಮನ ನೀಡಬೇಕು. ಸಂಘದ ಬೆಳವಣಿಗೆಯಲ್ಲಿ ಆರೋಗ್ಯಕರ ಪೈಪೋಟಿ ಒಳ್ಳೆಯದು ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಸಂಘದ ಶಿಲಾಲಕ ಅನಾವರಣಗೊಳಿಸಿ ಮಾತನಾಡಿ, ಸಹಕಾರಿ ಸಂಘಗಳು ಜನರಿಗೆ ಸರಳವಾಗಿ ಸಾಲ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಬಾದಾಮಿ ತಾಲೂಕಿನ ನಂದಿಕೇಶ್ವರ ಪಿಕೆಪಿಎಸ್ ಮಾದರಿಯಾಗಿದೆ ಎಂದರು.
ನಂದಿಕೇಶ್ವರ ಪಿಕೆಪಿಎಸ್ ಅಧ್ಯಕ್ಷ ಕುಮಾರಗೌಡ ಜನಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆ ಹಾಗೂ ಬಿಡಿಸಿಸಿ ಬ್ಯಾಂಕ್ ಸಹಾಯಧನದಿಂದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಎಲ್ಲ ಸಹಕಾರಿ ಸಂಘಗಳು ನಬಾರ್ಡ್ ಸಹಾಯಧನದಿಂದ ಹೊಸ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳು, ಗುಳೇದಗುಡ್ಡದ ಕಾಶಿನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಾಲೂಕಿನ ಪಿಕೆಪಿಎಸ್ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಯಿತು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಆರ್.ಮೆಳ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಎಂ.ಬಿ. ಹಂಗರಗಿ, ಉಪಾಧ್ಯಕ್ಷ ಮುತ್ತಣ್ಣ ರೋಣದ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಸಿದ್ದನಗೌಡ ಪಾಟೀಲ, ಬಸವರಾಜ ಪಾಟೀಲ, ಪಿ.ಆರ್.ಗೌಡರ, ಮುತ್ತಣ್ಣ ಕಳ್ಳಿಗುಡ್ಡ, ರಾಜಮಹ್ಮದ ಬಾಗವಾನ, ಹೊನ್ನಯ್ಯ ಹಿರೇಮಠ, ರುದ್ರೇಶ ಭಿಕ್ಷಾವತಿಮಠ ಮತ್ತಿತರರಿದ್ದರು. ನಿರ್ದೇಶಕ ಶಿವರಾಜ ತುಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಕಲಾಲ ಸ್ವಾಗತಿಸಿದರು, ರವಿ ಕಂಗಳ ನಿರ್ವಹಿಸಿದರು.