ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

sslc exam
Published on

ಬೆಳಗಾವಿ/ಚಿಕ್ಕೋಡಿ: ಕೋವಿಡ್-19 ಆತಂಕ, ಪರೀಕ್ಷೆ ನಡೆಸುವ ಸಂಬಂಧ ಭಿನ್ನ ಅಭಿಪ್ರಾಯದ ಮಧ್ಯೆಯೂ ಶಿಕ್ಷಣ ಇಲಾಖೆ ಬೆಳಗಾವಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ನಡೆಸಿದೆ.

ಪ್ರತಿ ಬಾರಿಯಂತೆ ಪರೀಕ್ಷೆ ನಡೆಯಲಿದ್ದರೂ, ಈ ಬಾರಿ ಪರಿಸ್ಥಿತಿ ಪ್ರತಿಕೂಲವಾಗಿದೆ. ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯದಂತೆ ಸರ್ಕಾರ ನಿರ್ದೇಶಿಸಿದೆ. ಪ್ರವಾಹದಿಂದ ಬಾಧಿತವಾಗಬಹುದಾದ ಶಾಲಾ ಕಟ್ಟಡಗಳಲ್ಲಿ ಪರೀಕ್ಷೆ ನಡೆಸದಂತೆ ಸೂಚಿಸಿದೆ. ಇಂಥ ಸನ್ನಿವೇಶದಲ್ಲೂ ಮಕ್ಕಳ ಭವಿಷ್ಯಕ್ಕೆ ಬುನಾದಿ ಎಂದೇ ನಂಬಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ: ಕೋವಿಡ್-19 ಆತಂಕದ ಹಿನ್ನೆಲೆ ವಲಸೆ ಕಾರ್ಮಿಕರು ತವರಿನತ್ತ ಮುಖ ಮಾಡಿದ್ದಾರೆ. ಅಂಥವರ ಮಕ್ಕಳಿಗೆ ತಾವು ಇಚ್ಛಿಸಿದ ಕೇಂದ್ರದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಾರ್ವಜನಿಕರ ಶಿಕ್ಷಣ ಇಲಾಖೆ ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

73 ಸಾವಿರ ವಿದ್ಯಾರ್ಥಿಗಳು: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 124 ಕೇಂದ್ರಗಳಿದ್ದು, 33,180 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗಾವಿಯಲ್ಲಿ ಓದುತ್ತಿದ್ದ 381 ವಿದ್ಯಾರ್ಥಿಗಳು ಈ ಬಾರಿ ಬೇರೆ ಜಿಲ್ಲೆಗಳ ಕೇಂದ್ರಗಳಲ್ಲಿ ಪರೀಕ್ಷೆ ಬರೆದರೆ, ಬೇರೆಡೆಯಿಂದ ಬೆಳಗಾವಿಗೆ ಬಂದಿರುವ 770 ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಎದುರಿಸಲಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 147 ಕೇಂದ್ರಗಳಿದ್ದು, 40,834 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಚಿಕ್ಕೋಡಿಯ 278 ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆಗೆ ಹಾಜರಾದರೆ, ತವರಿನತ್ತ ವಲಸೆ ಬಂದಿರುವ 494 ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕೊಠಡಿ ಮೀಸಲಿಡಲಾಗಿದೆ. ಈ ಹಿಂದೆ ಒಂದು ಕೊಠಡಿಯಲ್ಲಿ 24 ಮಕ್ಕಳು ಪರೀಕ್ಷೆ ಬರೆಯುತ್ತಿದ್ದರು. ಈ ಬಾರಿ ಕರೊನಾ ವೈರಸ್ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆಯನ್ನು 18ಕ್ಕೆ ಇಳಿಸಲಾಗಿದೆ.
ವಿಶೇಷ ಬಸ್ ವ್ಯವಸ್ಥೆ: ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಸಂಸ್ಥೆಗೆ ಶಿಕ್ಷಣ ಇಲಾಖೆ ಪತ್ರ ಬರೆದಿದೆ. ಅಲ್ಲದೆ, ಕೆಲ ಖಾಸಗಿ ಶಾಲೆಗಳ ಬಸ್‌ಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಿದೆ.

ಚಿಂತೆಯಿಂದ ವಿದ್ಯಾರ್ಥಿಗಳು ನಿರಾತಂಕ: ಉದ್ಯೋಗ ಅರಸಿ ಬೆಳಗಾವಿಯ ಕಾರ್ಮಿಕರು ಬೆಂಗಳೂರು, ಮಂಗಳೂರು, ಮತ್ತಿತರ ಕಡೆ ತೆರಳಿದ್ದರು.ಮಕ್ಕಳನ್ನೂ ಅಲ್ಲೇ ಓದಿಸುತ್ತಿದ್ದರು. ಕರೊನಾದಿಂದಾಗಿ ಕುಟುಂಬ ಸಮೇತವಾಗಿ ತಮ್ಮೂರು ಸೇರಿದ್ದರು.ಮಹಾನಗರಗಳ ಹಾಸ್ಟೆಲ್, ಸಂಬಂಧಿಕರ ಮನೆಗಳಲ್ಲಿದ್ದು, ಅಭ್ಯಾಸ ಮಾಡುತ್ತಿದ್ದವರು ಹಳ್ಳಿಗಳತ್ತ ಮುಖ ಮಾಡಿದ್ದರು. ಕರೊನಾಗೆ ಹೆದರಿ ಊರಿಗೆ ಬಂದಿದ್ದೇವೆ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದು ಹೇಗೆ? ಎಂಬ ಚಿಂತೆ ವಿದ್ಯಾರ್ಥಿ ಗಳನ್ನು ಕಾಡುತ್ತಿತ್ತು. ಇಂಥ ಮಕ್ಕಳಿಗಾಗಿಯೇ ವಿಶೇಷ ವ್ಯವಸ್ಥೆ ಕಲ್ಪಿಸಿದ ಇಲಾಖೆ ಗೊಂದಲಗಳಿಗೆ ತೆರೆ ಎಳೆದಿದೆ.

ಅನಾರೋಗ್ಯವಿದ್ದರೆ ಪ್ರತ್ಯೇಕ ಕೊಠಡಿ: ಕೇಂದ್ರಗಳಲ್ಲಿ ಶುಚಿತ್ವಕ್ಕೆ ಒತ್ತು ನೀಡುವ ಜತೆಗೆ, ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು. ಮಾರಕ ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅನಾರೋಗ್ಯದ ಲಕ್ಷಣ ಕಂಡುಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಆಸನ
ವ್ಯವಸ್ಥೆ ಮಾಡಲಾಗುವುದು ಎಂದು ಬೆಳಗಾವಿ ಡಿಡಿಪಿಐ ಡಾ.ಎ.ಬಿ.ಪುಂಡಲೀಕ ವಿಜಯವಾಣಿಗೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ 1 ಲಕ್ಷ ಮಾಸ್ಕ್ ತಯಾರಿಸಿ ಕೊಡಲಾಗಿದೆ.ಮೇಲ್ವಿಚಾರಕರಿಗೆ ಮಾಸ್ಕ್ ಮತ್ತು ಕೈಗವಸು ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ. ಸುರಕ್ಷತೆಗೆ ಒತ್ತು ನೀಡಲಾಗಿದೆ.|ಗಜಾನನ ಮನ್ನಿಕೇರಿ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ

ವಿದ್ಯಾರ್ಥಿಗಳು ತಾವು ವಾಸಿಸುತ್ತಿರುವ ನಗರ/ಗ್ರಾಮದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಅವರು ಪರೀಕ್ಷೆ ಎದುರಿಸಲಿದ್ದಾರೆ. ಗೊಂದಲ ತಲೆದೋರದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. | ಡಾ.ಎ.ಬಿ.ಪುಂಡಲೀಕ ಡಿಡಿಪಿಐ, ಬೆಳಗಾವಿ

| ಇಮಾಮಹುಸೇನ್ ಗೂಡುನವರ/ ಸುಭಾಸ ದಲಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net