

ಬಳ್ಳಾರಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಶನಿವಾರ ನಗರದ ಮೋತಿ ವೃತ್ತದಿಂದ ರಾಯಲ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.
ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಜಮಾಯಿಸಿದ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಡಿಸಿ ಕಚೇರಿಗೆ ತೆರಳಿ ತಹಸೀಲ್ದಾರ್ ಗುರುಪ್ರಸಾದ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಜನರ ನಿರೀಕ್ಷೆಗೂ ಮೀರಿ ಹೆಚ್ಚಿಸಿದೆ. ಇದರಿಂದ ಜನಸಾಮಾನ್ಯರಿಗೆ ಜೀವನ ನಡೆಸುವುದು ಹೊರೆಯಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬೆಲೆ ಇಳಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ದೇಶವ್ಯಾಪಿ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನೂರಾರು ಕಾರ್ಯಕರ್ತರು ಸೇರಿದ್ದರಿಂದ ವಿವಿಧ ವೃತ್ತಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಮುಖಂಡರಾದ ಶ್ರೀಧರ್, ಲೀನಾ ರೆಡ್ಡಿ, ಕುಮಾರಮ್ಮ, ಶಕುಂತಲಮ್ಮ, ಅಸುಂಡಿ ನಾಗರಾಜ್ ಇತರರಿದ್ದರು.