ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿ ಅಭಿವೃದ್ಧಿಯ ಸಂಕೇತ

16-pnp 1
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪಾಂಡವಪುರ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಶ್ರೀ ಶಂಕರಾನಂದ ವಿದ್ಯಾಪೀಠದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು. ಸಿ.ಎಂ.ಚನ್ನೇಗೌಡ, ಡಿ.ಕೆ.ದೇವೇಗೌಡ, ಬೋರೇಗೌಡ ಇತರರು ಇದ್ದರು.
Published on

ಪಾಂಡವಪುರ: ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿ ನಾಡಿನ ಅಭಿವೃದ್ಧಿಯ ಸಂಕೇತ ಎಂದು ಹಿರಿಯ ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಹೇಳಿದರು.

ತಾಲೂಕಿನ ಕುಂತಿಬೆಟ್ಟದ ಕುವೆಂಪು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ನಾಗರಿಕ ಶ್ರೇಯಸ್ಸಿಗೆ ಕಾರಣವಾಗುತ್ತಾರೆ. ಸಾಮಾನ್ಯವಾಗಿ ಮುಂದಿನ ತರಗತಿಗೆ ಹೋಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಹಿಂದೆ ಬೀಳುವುದು ಸಹಜ. ವಯಸ್ಸು ಹೆಚ್ಚಾದಂತೆ, ತರಗತಿಯಿಂದ ತರಗತಿಗೆ ಹೋದಂತೆ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಶ್ರಮ ಪಡಬೇಕು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಮುಂದೆ ಬರಬೇಕೆಂಬ ಛಲ, ಹಠ ಮನಸ್ಸಿನಲ್ಲಿ ಮೂಡಬೇಕು ಎಂದರು.

ಶಿಕ್ಷಣ ಹಾಗೂ ಬದುಕಿನ ರಂಗದಲ್ಲಿ ಮೇಲ್ಮಟ್ಟಕ್ಕೆ ಹೋಗಲು ಪ್ರಯತ್ನಿಸಬೇಕು. ಸಾಮಾಜಿಕ ಜಾಲತಾಣಗಳನ್ನು ವಿದ್ಯಾರ್ಥಿಗಳು ಸಕಾರಾತ್ಮಕ ನೆಲೆಗಟ್ಟಿನಲ್ಲಿ ತೆಗೆದುಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವುದರ ಜತೆಗೆ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಸಿ.ಎಂ.ಚನ್ನೇಗೌಡ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಅಭ್ಯಾಸ ನಡೆಸಿ ಉತೀರ್ಣ ರಾಗಿದ್ದಾರೆ. ಕೆಲವು ಮಕ್ಕಳು ಮನೆ ಹಾಗೂ ಗದ್ದೆ ಕೆಲಸ ಮಾಡಿಕೊಂಡು ಅಭ್ಯಾಸ ಮಾಡಿ ಉತ್ತಮ ಅಂಕ ಪಡೆದಿದ್ದಾರೆ. ನಮ್ಮ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎಚ್.ಸಿ.ಶ್ರೀಕಲಾ, ಎಚ್.ಕೆ.ಗೌತಮಿ, ಸಿ.ಕೆ.ಲಿಖಿತಾ, ಎಚ್.ಎಲ್.ಶ್ರೇಯಾ, ಧನುಶ್ರೀ, ಎಚ್.ಎಸ್.ಅಭಿಷೇಕ್, ಸಿ.ಎನ್.ಪ್ರೀತಂಗೌಡ, ಎಂ.ಎನ್.ಕುಸುಮಿತಾ, ಡಿ.ಎಸ್.ಮೋನಿಸ್‌ಗೌಡ, ಎ.ಎಸ್.ಸಿಂಚನಾ, ಸಿ.ಎಸ್.ಸುಮಂತ್‌ಗೌಡ, ಸಿ.ಪಿ.ಅಭಿಷೇಕ್ ಹಾಗೂ ಮೋಹನ್ ಗೌಡ ಅವರನ್ನು ಅಭಿನಂದಿಸಲಾಯಿತು.

ಶ್ರೀ ಶಂಕರಾನಂದ ವಿದ್ಯಾಪೀಠದ ಅಧ್ಯಕ್ಷ ಎಚ್.ಎಲ್.ನಂಜೇಗೌಡ, ಉಪಾಧ್ಯಕ್ಷ ಡಿ.ಕೆ.ದೇವೇಗೌಡ, ಗೌರವ ಕಾರ್ಯದರ್ಶಿ ಸಿ.ಎಂ.ಚನ್ನೇಗೌಡ, ನಿರ್ದೇಶಕ ಕೆನ್ನಾಳು ಚಂದ್ರು, ಮುಖ್ಯ ಶಿಕ್ಷಕ ನಾಗಪ್ಪ ಇತರರಿದ್ದರು.


ಶೇ.100 ಫಲಿತಾಂಶ : 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕುಂತಿಬೆಟ್ಟದ ಕುವೆಂಪು ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 13 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈ ಪೈಕಿ ಎಚ್.ಸಿ.ಶ್ರೀಕಲಾ 511 (ಶೇ.81.76), ಎಚ್.ಕೆ.ಗೌತಮಿ 510 (ಶೇ.81.60), ಸಿ.ಕೆ.ಲಿಖಿತಾ 503 (ಶೇ.80.48) ಹಾಗೂ ಎಚ್.ಎಲ್.ಶ್ರೇಯಾ 499 (ಶೇ.79.94) ಅಂಕಗಳನ್ನು ಗಳಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ನಾಗಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net