ಸರ್ಕಾರದಿಂದ ಬರ ಪರಿಹಾರ ಶೀಘ್ರ

Drought check
ಬರ ಪರಿಶೀಲನೆ
Published on

ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಸುಮಾರು 49, 556 ಸಾವಿರ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾನಿಯಾಗಿದ್ದು, ಈಗಾಗಲೇ ಕೇಂದ್ರ ಬರ ಪರಿಶೀಲನೆ ತಂಡಕ್ಕೂ ವರದಿ ಸಲ್ಲಿಸಲಾಗಿದೆ, ರಾಜ್ಯ ಸರ್ಕಾರದಿಂದ ಶೀಘ್ರ ಪರಿಹಾರ ವಿತರಣೆಯಾಗಲಿದೆ ಎಂದು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ, ದೇವನಹಳ್ಳಿಯ ಕುಂದಾಣ ಹಾಗೂ ದೊಡ್ಡಬಳ್ಳಾಪುರದಲ್ಲಿ ಅಧಿಕಾರಿಗಳ ತಂಡದೊಂದಿಗೆ ಬರ ಪರಿಶೀಲನೆ ನಡೆಸಿ ಮಾತನಾಡಿದರು. ಸರ್ಕಾರ ರೈತರ ಪರವಾಗಿದೆ, ರೈತರಿಗೆ ಸಹಕಾರಿಯಾಗಿ ಎಲ್ಲ ಬಗೆಯ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.
ಬರ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಸರ್ಕಾರದ ಯೋಜನೆಗಳನ್ನು ಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ದೇವನಹಳ್ಳಿ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಮಳೆಯಾಶ್ರಿತ ರಾಗಿ, ಕಡಲೆಕಾಯಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಈಗಾಗಲೇ ಸರ್ಕಾರದ ವತಿಯಿಂದ ಬರ ಪರಿಶೀಲನೆ ಪೂರ್ಣಗೊಂಡಿದೆ, ಕೇಂದ್ರ ತಂಡಕ್ಕೂ ಮಾಹಿತಿ ರವಾನೆಯಾಗಿದೆ ಎಂದರು.
ಸೂಲಿಬೆಲೆಯಲ್ಲಿ ಬರ ವೀಕ್ಷಣೆ: ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಗ್ರಾಮೀಣ ಪ್ರದೇಶದ ಪ್ರಮುಖ ಆಹಾರ ಬೆಳೆಯಾದ ರಾಗಿಗೆ ತೀವ್ರ ಪೆಟ್ಟು ಬಿದ್ದಿದೆ. ಶೇ.90 ರಾಗಿ ಬೆಳೆ ನಷ್ಟವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಸೂಲಿಬೆಲೆ ಹೋಬಳಿ ಅರಸನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಸ್ಥಳೀಯ ರೈತರಿಂದ ಮಾಹಿತಿ ಪಡೆದು ಅವರಿಗೆ ಆತ್ಮಸೈರ್ಯ ತುಂಬಿದರು. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಯಾವಾಗಲೂ ಜತೆಯಲ್ಲಿರುತ್ತದೆ ಎಂದು ಭರವಸೆ ನೀಡಿದರು. ವಾಡಿಕೆಗಿಂತ ಮಳೆ ಪ್ರಮಾಣ ಕ್ಷೀಣಿಸಿದ್ದು ಹೊಸಕೋಟೆ ತಾಲೂಕಿನಲ್ಲಿ ಬೆಳೆ ನಷ್ಟವಾಗಿರುವ ಅಂಕಿಆಂಶಗಳನ್ನು ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net