

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರು ಆಗಬಹುದು. ನಮ್ಮ ತಂದೆ ರೈತರಾಗಿದ್ದರು,ನಿಮ್ಮ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕಾದರೆ ಗುಣಮಟ್ಟದ ಶಿಕ್ಷಣ, ಆರ್ಥಿಕ ಸ್ಥಿತಿ ಹಾಗೂ ನಾಯಕತ್ವದ ಗುಣ ಬೆಳಸಿಕೊಳ್ಳಬೇಕು ಎಂದು ಮಕ್ಕಳೊಂದಿಗೆ ಗುರುವಾರ(ನ.14) ನಡೆದ ಸಂವಾದಲ್ಲಿ ಡಿಸಿಎಂ ಡಿಕೆ ಶಿವಕುಮಾರ್(DK Shivakaumar) ಹೇಳಿದರು.
ಪಂಚಶೀಲನಗರದ ಪಾಲಿಕೆ ಹಿರಿಯ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿ ವಿದ್ಯಾಸಾಗರ್, ನಾನು ಈ ರಾಜ್ಯದ ಸಿಎಂ ಆಗಬೇಕು, ಇದಕ್ಕಾಗಿ ಏನು ಓದಬೇಕು ಎಂದು ಕೇಳಿದ ಪ್ರಶ್ನೆಗೆ ಡಿಕೆಶಿ ಕೊಟ್ಟ ಉತ್ತರ ಇದು.
“ಮಕ್ಕಳಲ್ಲಿ ಜ್ಞಾನ ಹೆಚ್ಚಾಗಬೇಕೆಂಬ ಉದ್ದೇಶದಿಂದಲೇ ಕಾರ್ಯಕ್ರಮಗಳಲ್ಲಿ ನಿರೂಪಣೆ ಹಾಗೂ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ನೀವೆಲ್ಲರೂ ಸಿಎಂ, ಡಿಸಿಎಂ, ಐಎಎಸ್ ಅಧಿಕಾರಿಗಳ ಜೊತೆ ನೇರವಾಗಿ ಹಾಗೂ ಧೈರ್ಯವಾಗಿ ಮಾತನಾಡುತ್ತಿದ್ದೀರಾ, ವಿಧಾನಸೌಧನ ಸಮ್ಮೇಳನಾ ಸಭಾಂಗಣವು ದೇಶಕ್ಕೆ ಸಂವಿಧಾನ ತರುವಂತಹ ಜಾಗ, ಶಾಸಕಾಂಗ ಸಭೆ ನಡೆಸುವಂತಹ ಜಾಗ, ನೀವೇ ಇಲ್ಲಿ ಕೂತು, ಸಿಎಂ, ಡಿಸಿಎಂ, ಐಎಎಸ್ ಅಧಿಕಾರಿಗಳು ಆಗಬೇಕು” ಎಂದು ಸಲಹೆ ನೀಡಿದರು.
ಗಂಡು ಮಕ್ಕಳಿಗೂ ಶಕ್ತಿ ಯೋಜನೆ ನೀಡುವ ಬಗ್ಗೆ ಚರ್ಚೆ
ನೀಲಸಂದ್ರದ ಪಾಲಿಕೆ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿ ಚರಣ್, ನೀವು 5 ಗ್ಯಾರಂಟಿ ನೀಡಿದ್ದೀರಿ, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದು, ನಮ್ಮ ಅಮ್ಮ ಅಕ್ಕ ತಂಗಿಯರನ್ನು ಮಾತ್ರ ಊರಿಗೆ ಕರೆದುಕೊಂಡು ಹೋಗುತ್ತಾರೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ಲವೇ ಎಂದು ಕೇಳಿದಾಗ, “ನಿಮ್ಮ ತಾಯಿಗೆ 2000, ಬಸ್ ಉಚಿತ, 10 ಕೆಜಿ ಅಕ್ಕಿ, ಉಚಿತ ವಿದ್ಯುತ್ ನೀಡಲಾಗುತ್ತಿದೆ. ನೀನು ಕೇಳಿರುವ ಪ್ರಶ್ನೆಗೆ ಸರ್ಕಾರದಲ್ಲಿ ಚರ್ಚಿಸಿ ಒಂದು ವಯೋಮಿತಿಯವರೆಗೆ ಯೋಚಿಸಿ ಮುಂದೆ ಕ್ರಮವಹಿಸಲಾಗುವುದು” ಎಂದು ಭರವಸೆ ನೀಡಿದರು.
2 ಸಾವಿರ ಸಿಎಸ್ಆರ್ ಶಾಲೆಗಳ ಸ್ಥಾಪನೆ
ಹೇರೋಹಳ್ಳಿ ಪಾಲಿಕೆ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಶಾಲಿನಿ ಬಿ.ಆರ್, ಗ್ರಾಮೀಣ ಭಾಗದಲ್ಲಿ ಪ್ರೌಢಶಾಲೆಗಳ ಕೊರತೆ ಇದೆ ಎಂದು ಕೇಳಿದಾಗ, “ಸರ್ಕಾರದಿಂದ ಹೊಸ ಯೋಜನೆ ಜಾರಿ ಮಾಡಲಾಗುತ್ತಿದ್ದು, 3 ಎಕರೆ ಪ್ರದೇಶದಲ್ಲಿ 2000 ಕಡೆ ಶಾಲೆ ನಿರ್ಮಾಣ ಮಾಡಲು ಮುಂದಾಗುತ್ತಿದೆ. ಅದನ್ನು ಖಾಸಗಿ ಶಾಲೆಗಳು ದತ್ತು ಪಡೆದುಕೊಳ್ಳಬೇಕು. ನಗರದಲ್ಲಿ ಬಂದು ವಿದ್ಯಾಭಾಸ ಪಡೆಯುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿಯೇ ಶಾಲೆ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ ಡಿಸಿಎಂ ಮುಂದೆ ಮಕ್ಕಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.