

ಕೊಪ್ಪಳ: ಕಾರ್ಮಿಕ ವರ್ಗದ ಶ್ರಮಕ್ಕೆ ಎಲ್ಲರೂ ಗೌರವ ನೀಡಬೇಕು ಹಾಗೂ ಕಾರ್ಮಿಕರಿಗೆ ಕಾನೂನಿನಲ್ಲಿರುವ ಹಕ್ಕುಗಳನ್ನು ದೊರಕಿಸಿ ಕೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್. ದರಗದ ಹೇಳಿದರು.
ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರಮಿಕರ ಬೆವರಿನ ಬೆಲೆಗೆ ತಕ್ಕ ಗೌರವ ಸಿಗಬೇಕು. ಶ್ರಮಿಕ ಮತ್ತು ಮಾಲೀಕನ ಸಂಬಂಧ ತಂದೆ ಮಕ್ಕಳ ರೀತಿಯಲ್ಲಿರಬೇಕು. ಕಾರ್ಮಿಕರಿಗೆ ತಾರತಮ್ಯ ಮಾಡದೆ ಕೆಳಹಂತದ ಕಾರ್ಮಿಕ ಇರಲಿ ಅಥವಾ ಮೇಲ್ಮಟ್ಟದ ಅಧಿಕಾರಿ ಇರಲಿ ಎಲ್ಲರ ಕೆಲಸಕ್ಕೆ ಗೌರವ ದೊರಕಬೇಕು. ಕಾರ್ಮಿಕರು ಶ್ರಮಜೀವಿಗಳು ಅವರು ಘನತೆಯಿಂದ ಬಾಳಬೇಕು ಎಂದು ತಿಳಿಸಿದರು.
ಬಹದ್ದೂರಬಂಡಿ ಗ್ರಾಪಂ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ನಮ್ಮೂರಿನ ಗ್ರಾಮೀಣ ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕ ಸಂಘದವರು ಪಡೆದುಕೊಳ್ಳುತ್ತಿದ್ದಾರೆ. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಎಲ್ಲರೂ ಕ್ರಿಯಾಶೀಲರಾಗಿ ಇಲಾಖೆಯ ಸೌಲಭ್ಯಗಳನ್ನು ಗ್ರಾಮದ ಎಲ್ಲಾ ಕಾರ್ಮಿಕರಿಗೆ ಒದಗಿಸಲು ಶ್ರಮಿಸುತ್ತಿದ್ದಾರೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ವಿವಿಧ ಸಂಘದ ಪದಾಧಿಕಾರಿಗಳು, ಕಾರ್ಮಿಕ ಇಲಾಖೆ ಸಿಬ್ಬಂದಿ ಇದ್ದರು.