ಕಸಾಪ ಜಿಲ್ಲಾಧ್ಯಕ್ಷರ ನಡೆಗೆ ಅಸಮಾಧಾನ

Dissatisfaction with Kasapa District President's move
ಮುದ್ದೇಬಿಹಾಳದಲ್ಲಿ ಶನಿವಾರ ನಡೆದ ಸಾಹಿತಿಗಳ ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ನಡೆ ವಿರೋಧಿಸಿದರು. ಅಶೋಕಮಣಿ, ಅಬ್ದುಲ್ ರೆಹಮಾನ ನಾಯ್ಕೋಡಿ, ಐ.ಬಿ. ಹಿರೇಮಠ, ರುದ್ರೇಶ ಕಿತ್ತೂರ, ಎಂ.ಬಿ. ಗುಡಗುಂಟಿ, ಸಿದ್ದನಗೌಡ ಬಿಜ್ಜೂರ, ಹುಸೇನಮುಲ್ಲಾ ಕಾಳಗಿ ಇತರರಿದ್ದರು.
Published on

ಮುದ್ದೇಬಿಹಾಳ: ವಿಜಯಪುರದಲ್ಲಿ ಹಮ್ಮಿಕೊಂಡಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಮುದ್ದೇಬಿಹಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಹೆಸರು ಹಾಕದೆ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಸಣ್ಣತನ ತೋರಿದ್ದಾರೆ ಎಂದು ಮುದ್ದೇಬಿಹಾಳ ತಾಲೂಕಿನ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಭೆ ಸೇರಿದ್ದ ತಾಲೂಕಿನ ಸಾಹಿತಿಗಳು ಕಳೆದ ವಾರವಷ್ಟೆ ಇಡೀ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಿದ ಅಧ್ಯಕ್ಷ ಕಾಮರಾಜ ಬಿರಾದಾರ ಅವರ ಹೆಸರನ್ನು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರ ಯಾದಿಯಿಂದ ಹೊರಗಿಟ್ಟು ಜಿಲ್ಲಾಧ್ಯಕ್ಷರು ಸಣ್ಣತನ ಮೆರೆದಿದ್ದಾರೆ. ಅಲ್ಲದೇ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಸಾಹಿತಿಗಳು ಮತ್ತು ಸಂಘಟಕರ ಹೆಸರುಗಳನ್ನು ಪರಿಗಣಿಸುವಲ್ಲೂ ತಾಲೂಕು ಅಧ್ಯಕ್ಷರ ಶಿಾರಸ್ಸುಗಳನ್ನು ಪಡೆಯದೇ ತಮಗೆ ಇಷ್ಟ ಬಂದವರಿಗೆ ಪದೇ ಪದೇ ಅವಕಾಶ ನೀಡಿ ಸ್ವಜನಪಕ್ಷಪಾತ ತೋರಿ ನೈಜ ಪ್ರತಿಭಾವಂತ ಸಾಹಿತಿಗಳಿಗೆ ಅವಮಾನಿಸುತ್ತಿದ್ದಾರೆ ಎಂದು ಸಾಹಿತಿಗಳು ದೂರಿದರು.

ಹಿರಿಯ ಸಾಹಿತಿಗಳಾದ ಅಶೋಕಮಣಿ, ಅಬ್ದುಲ್ ರೆಹಮಾನ ನಾಯ್ಕೋಡಿ, ಐ.ಬಿ. ಹಿರೇಮಠ, ರುದ್ರೇಶ ಕಿತ್ತೂರ, ಎಂ.ಬಿ. ಗುಡಗುಂಟಿ, ಸಿದ್ದನಗೌಡ ಬಿಜ್ಜೂರ, ಹುಸೇನಮುಲ್ಲಾ ಕಾಳಗಿ, ಸಂಗಮೇಶ ಶಿವಣಗಿ, ಬಸವರಾಜ ನಾಲತವಾಡ, ವೈ.ಎಚ್. ವಿಜಯಕರ, ಜಹಾಂಗೀರ ಮುಲ್ಲಾ, ಸಿದ್ದಣ್ಣ ಹಡಲಗೇರಿ, ಶಿವಪುತ್ರ ಅಜಮನಿ ಇದ್ದರು.

ಆತ್ಮಾವಲೋಕನ ಮಾಡಿಕೊಳ್ಳಲಿ

ಮುದ್ದೇಬಿಹಾಳ ತಾಲೂಕು ಅಧ್ಯಕ್ಷರನ್ನು ಒಂದು ಗೋಷ್ಠಿಯಲ್ಲಿ ಹಾಕಿದ್ದೇವೆ. ತಾಲೂಕು ಅಧ್ಯಕ್ಷರ ಪಟ್ಟಿಯಲ್ಲಿ ಅವರ ಹೆಸರು ಲೋಪವಾಗಿದ್ದು ಸತ್ಯ. ತಾಲೂಕು ಸಮ್ಮೇಳನದಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಅವರ‌್ಯಾರೂ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೂ ನಾವು, ನಮ್ಮ ಪರಿಷತ್ತು ಅವೆಲ್ಲವುಗಳನ್ನು ಬದಿಗಿಟ್ಟು ನಮ್ಮ ಸಾಹಿತಿಗಳು, ನಮ್ಮ ಪದಾಧಿಕಾರಿಗಳು ಸಮ್ಮೇಳನದ ಯಶಸ್ವಿಗೆ ಪೂರ್ಣ ಸಹಕಾರ ನೀಡಿದ್ದೇವೆ. ಅವರು ಪ್ರತಿಯೊಂದಕ್ಕೂ ಸಮಸ್ಯೆ ಮಾಡುವ ಪ್ರವೃತ್ತಿವುಳ್ಳವರು. ಪರಿಷತ್ತಿನಲ್ಲಿ ಅವರು ಕೆಲಸ ಮಾಡಲಿಕ್ಕೆ ಎಷ್ಟು ಅರ್ಹರು? ಅನ್ನುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net