

ಬಾಳೆಹೊನ್ನೂರು: ನವರಾತ್ರಿ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ದುರ್ಗೆಯನ್ನು ವಿವಿಧ ರೂಪಗಳಲ್ಲಿ ಆರಾಧನೆ ಮಾಡುವುದರಿಂದ ಮನುಕುಲದ ಸಕಲ ಸಂಕಷ್ಟಗಳು ದೂರಾಗಲಿವೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಟ್ರಸ್ಟಿ ಜಿ.ರಾಜಗೋಪಾಲ ಜೋಷಿ ಹೇಳಿದರು.
ಪಟ್ಟಣದ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಹದಿನೈದನೇ ವರ್ಷದ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಮಧುರ ಜೀವನಕ್ಕೆ ಉತ್ತಮ ಚಿಂತನೆ ಅಗತ್ಯ. ಆನಂದ, ಧನ್ಯತೆ ಪಡೆಯಲು ದೈವ ಸಾನ್ನಿಧ್ಯ ಅಗತ್ಯವಾಗಿ ಇರಬೇಕಿದೆ. ಆಡಂಬರಕ್ಕೆ ಒತ್ತು ನೀಡದೆ ಭಾವಪೂರ್ವಕವಾಗಿ ಮಾಡುವ ಕೆಲಸಗಳು ಭಗವಂತನ ಮೆಚ್ಚುಗೆಗೆ ಪಾತ್ರವಾಗಲಿವೆ. ಬಾಳೆಹೊನ್ನೂರಿನಲ್ಲಿ ಹದಿನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನವರಾತ್ರಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ದುರ್ಗಾ ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಈ ಬಾರಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸುತ್ತಿದ್ದು, ಪ್ರತಿದಿನ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. ಪ್ರತಿ ದಿನ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಸ್ಕೃತಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಗುರುವಾರ ಮುಂಜಾನೆ ಕ್ಷೇತ್ರನಾಥ ಮಾರ್ಕಂಡೇಶ್ವರ ಸ್ವಾಮಿಗೆ ರುದ್ರಾಭಿಷೇಕ, ನಾಗದೇವರಿಗೆ ಕ್ಷೀರಾಭಿಷೇಕ, ಮೃತ್ಯಂಬಿಕಾ ಅಮ್ಮನವರಿಗೆ ಅಭಿಷೇಕ, ಸಹಸ್ರನಾಮಾರ್ಚನೆ ಹಾಗೂ ಲಸಮರ್ಪಣೆ, ದುರ್ಗಾ ಸನ್ನಿಧಿಯಲ್ಲಿ ಗಣಹೋಮ ನಡೆಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದುರ್ಗಾಪರಮೇಶ್ವರಿ ವಿಗ್ರಹ ಪ್ರತಿಷ್ಠಾಪಿಸಲಾಯಿತು.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ತಂದಿದ್ದ ಬಾಗಿನವನ್ನು ದುರ್ಗಾದೇವಿ ಮತ್ತು ಮೃತ್ಯಂಬಿಕಾ ಅಮ್ಮನವರ ದೇವಸ್ಥಾನಕ್ಕೆ ರಾಜಗೋಪಾಲ ಜೋಷಿ ಸಮರ್ಪಿಸಿದರು.
ಮಾರ್ಕಂಡೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ದುರ್ಗಾ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಉಪಾಧ್ಯಕ್ಷ ಶಿವರಾಮ ಶೆಟ್ಟಿ, ಪ್ರಸನ್ನಾ ಜಿ. ಭಟ್, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಉಪೇಂದ್ರ, ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಶ್ರೀಕಾಂತ್, ಬಿ.ಕೆ.ನಾಗರಾಜ್, ನಾರಾಯಣ ಶೆಟ್ಟಿ, ಕೆ.ಪ್ರಶಾಂತ್‌ಕುಮಾರ್, ಮಂಜು ಹೊಳೆಬಾಗಿಲು ಸೇರಿದಂತೆ ಸಮಿತಿ ಸದಸ್ಯರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಮಧ್ಯಾಹ್ನ ಹಂಸವಾಹಿನಿ ಬ್ರಾಹ್ಮೀ ಪೂಜೆ, ಸಪ್ತಶತೀ ಪಾರಾಯಣ ಪೂಜೆ ನಡೆಯಿತು. ಅ.4ರ ಬೆಳಗ್ಗೆ 8.30ರಿಂದ ಮಧ್ಯಾಹ್ನದವರೆಗೆ ವೃಷಭವಾಹಿನಿ, ಮಾಹೇಶ್ವರಿ ಪೂಜಾ ಪಾರಾಯಣ, ಸಂಜೆ 6ರಿಂದ ಭಕ್ತರಿಂದ ಪೂಜಾ ಸೇವೆ, ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ತುಳು ಹಾಸ್ಯ ಯಕ್ಷಗಾನ ಕಲಾವಿದರ ಸಂಗಮದಲ್ಲಿ ಯಕ್ಷ-ಹಾಸ್ಯ ವೈಭವನ ನಡೆಯಲಿದೆ.