ಸಭಾಪತಿ ಅಧಿಕಾರವಲ್ಲ ಜವಾಬ್ದಾರಿ

ಅಭಿನಂದನೆ ಸ್ವೀಕರಿಸಿ ಅಭಿಪ್ರಾಯಿಸಿದ ಸಭಾಪತಿ ಸಲೀಂ ಅಹ್ಮದ್
Saleem Ahammed
ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ ಸಭಾಪತಿ ಸಲೀಂ ಅಹ್ಮದ್ ಅವರನ್ನು ಅಭಿನಂದಿಸಲಾಯಿತು.
Published on: 

ಹುಬ್ಬಳ್ಳಿ: ಸಭಾಪತಿ ಸ್ಥಾನ ಸಿಕ್ಕಿರುವುದು ಅಧಿಕಾರವಲ್ಲ, ಅದೊಂದು ಬಹುದೊಡ್ಡ ಜವಾಬ್ದಾರಿ. ಪವಿತ್ರವಾದ ಕೆಲಸ ಎಂದು ಸಭಾಪತಿ ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು.

ಧಾರವಾಡ ಜಿಲ್ಲಾ ನಾಗರಿಕರ ವೇದಿಕೆ ಆಶ್ರಯದಲ್ಲಿ ಇಲ್ಲಿಯ ನಾನಕೀ ಕಲ್ಯಾಣಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದ ಹಿತದೃಷ್ಟಿಯಿಂದ ಆಡಳಿತ ಹಾಗೂ ಪ್ರತಿಪಕ್ಷಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕು. ಇಂಥ ಜವಾಬ್ದಾರಿ ಸಾಮಾನ್ಯವಾದುದಲ್ಲ ಎಂದು ವಿಶ್ಲೇಷಿಸಿದರು.

45 ವರ್ಷ ಪಕ್ಷದ ಸೇವೆ ಮಾಡಿದ್ದೇನೆ. ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಇವೆಲ್ಲವೂ ಒಟ್ಟುಗೂಡಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಅದನ್ನು ಸರಿಯಾಗಿಯೇ ನಿಭಾಯಿಸುತ್ತೇನೆ ಹೊರತು ತಲೆಬಾಗುವ ಕೆಲಸ ಮಾಡುವುದಿಲ್ಲ ಎಂದು ವಾಗ್ದಾನ ಮಾಡಿದರು.

ಶಿರಹಟ್ಟಿಯ ಶ್ರೀ ಫಕೀರ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಲೀಂ ಅಹ್ಮದ್ ಅವರು ಸಹೃದಯರು. ಅವರ ಸೇವೆಗೆ ತಕ್ಕ ಮನ್ನಣೆ ಸಿಕ್ಕಿದೆ. ಅವರಜ ಎಲ್ಲರನ್ನೂ ಪ್ರೀತಿಯಿಂದ ಕಾಣುವ ವಿಶ್ವಾಸವಿದೆ. ಅವರಿಗೆ ಇನ್ನಷ್ಟು ಅಧಿಕಾರ ಒಲಿದು ಬರಲಿ ಎಂದು ಆಶೀರ್ವದಿಸಿದರು.

ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತರಾಗಿ ದುಡಿದವರಿಗೆ ನಮ್ಮ ಪಕ್ಷ ಯಾವ ಹುದ್ದೆಗಳನ್ನು ನೀಡಲಿದೆ ಎಂಬುದಕ್ಕೆ ಸಲೀಂ ಅಹ್ಮದ್ ಅವರೇ ಉದಾಹರಣೆಯಾಗಿ ಕಾಣುತ್ತಾರೆ. ತಳಮಟ್ಟದಿಂದ ಕೆಲಸ ಮಾಡಿರುವ ಇವರಿಗೆ ಉನ್ನತ ಸ್ಥಾನ ಒಲಿದು ಬಂದರೂ ಯಾವುದೇ ಹಮ್ಮುಬಿಮ್ಮುಗಳಿಲ್ಲ. ಚಿಂತಕರ ಚಾವಡಿಯನ್ನು ಸಮಾನವಾಗಿ ತೆಗೆದುಕೊಂಡು ಹೋಗುವುದರ ಜತೆಗೆ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷ, ಶಾಸಕ ಎನ್.ಎಚ್. ಕೋನರಡ್ಡಿ, ಎಂಎಲ್‌ಸಿ ಎಫ್.ಎಚ್. ಜಕ್ಕಪ್ಪನವರ, ಶ್ರೀ ಚನ್ನಬಸವ ಸ್ವಾಮೀಜಿ, ಗ್ಯಾನಿ ಜಸ್ವೀರ ಸಿಂಗ್, ಇತರರು ಅಭಿನಂದನಾ ನುಡಿಗಳನ್ನಾಡಿದರು.

ಬಿಷಪ್ ಮಾರ್ಟಿನ್ ಬೋರ್ಗಾವಿ, ತಾಜುದ್ದೀನ್ ಖಾದ್ರಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸದಾನಂದ ಡಂಗನವರ, ಚಂದ್ರಶೇಖರ ಜುಟ್ಟಲ, ಪ್ರಮುಖರಾದ ಮೋಹನ ಲಿಂಬಿಕಾಯಿ, ಎಂ.ಎಸ್. ಅಕ್ಕಿ, ವಿಶ್ವನಾಥ ಕುಲಕರ್ಣಿ, ಪ್ರೊ. ಶಿವಾನಂದ ಶೆಟ್ಟರ್, ಇತರರಿದ್ದರು.