ರೋಗಿಗಳ ಜೀವನ ಮಟ್ಟ ಸುಧಾರಿಸಲು ಪ್ರಯತ್ನಿಸಿ

ಮೆಡಿಕೇರಿ ಸೂಪರ್ ಸ್ಪೆಷಾಲಿಟಿ ಇಎನ್‌ಟಿ ಕೇಂದ್ರದ ನಿರ್ದೇಶಕ ಡಾ. ಶಂಕರ ಮೆಡಿಕೇರಿ ಸಲಹೆ
ent sammelana
ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಆಯೋಜಿಸಿರುವ ಇಎನ್‌ಟಿ ತಜ್ಞರ ಸಮ್ಮೇಳನವನ್ನು ಮೆಡಿಕೇರಿ ಸೂಪರ್ ಸ್ಪೆಷಾಲಿಟಿ ಇಎನ್‌ಟಿ ಕೇಂದ್ರದ ನಿರ್ದೇಶಕ ಡಾ. ಶಂಕರ ಮೆಡಿಕೇರಿ ಶುಕ್ರವಾರ ಉದ್ಘಾಟಿಸಿದರು.
Published on: 

ಹುಬ್ಬಳ್ಳಿ: ವೈದ್ಯರ ಬಳಿಗೆ ಬರುವ ರೋಗಿಗಳ ಕಾಯಿಲೆ ಗುಣಪಡಿಸುವುದರ ಜತೆಗೆ ಅವರ ಜೀವನ ಮಟ್ಟ ಸುಧಾರಣೆಗೂ ಪ್ರಯತ್ನಿಸಬೇಕು ಎಂದು ಬೆಂಗಳೂರಿನ ಮೆಡಿಕೇರಿ ಸೂಪರ್ ಸ್ಪೆಷಾಲಿಟಿ ಇಎನ್‌ಟಿ ಕೇಂದ್ರದ ನಿರ್ದೇಶಕ ಡಾ. ಶಂಕರ ಮೆಡಿಕೇರಿ ಸಲಹೆ ನೀಡಿದರು.

ಭರತೀಯ ಕಿವಿ, ಮೂಗು, ಗಂಟಲು ತಜ್ಞರ ಸಂಘ (ಎಒಐ) ಹು-ಧಾ ಶಾಖೆ ವತಿಯಿಂದ ಇಲ್ಲಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ (ಕೆಎಂಸಿಆರ್‌ಐ) ರಾಣಿ ಚನ್ನಮ್ಮ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ 43ನೇ ರಾಜ್ಯ ಮತ್ತು 21ನೇ ಎಒಐ ದಕ್ಷಿಣ ವಲಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ವೈದ್ಯರು ವೃತ್ತಿಪರ ಜೀವನದಲ್ಲಿ ಕಲಿಯುತ್ತಿರಬೇಕು. ವಿದ್ಯಾರ್ಥಿಗಳಲ್ಲಿರುವ ಹಂಬಲ ನಿಮ್ಮಲ್ಲಿರಬೇಕು. ತಾಂತ್ರಿಕ ಆವಿಷ್ಕಾರ ನಡುವೆಯೂ ಮಾನವೀಯತೆಯನ್ನು ರೂಢಿಸಿಕೊಳ್ಳಬೇಕು. ಹೀಗಿದ್ದಾಗ ಮಾತ್ರ ರೋಗಿಗಳ ರೋಗ ಗುಣಪಡಿಸಲು ಸಾಧ್ಯ ಎಂದರು.

ಹೊಸ ವಿಷಯ, ತಜ್ಞರ ಕಾರ್ಯನೈಪುಣ್ಯತೆ, ವಿಚಾರ ವಿನಿಮಯ, ಅನುಭವ ಹಂಚಿಕೊಳ್ಳಲು ಇಂಥ ಸಮ್ಮೇಳನಗಳು ಅಮೂಲ್ಯವಾದವು. ಸಹೋದ್ಯೋಗಿಗಳೊಂದಿಗೆ ಚರ್ಚಿಸಲು ಮತ್ತು ಪರಸ್ಪರ ಕಲಿಯಲು ಅನುಕೂಲವಾಗಲಿದೆ. ಯುವ ಇಎನ್‌ಟಿ ಶಸ್ತ್ರಚಿಕಿತ್ಸಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಅನುಭವಿ ಸಹೋದ್ಯೋಗಿಗಳೊಂದಿಗೆ ಸಂವಾದ ನಡೆಸಲು, ಜ್ಞಾನ ಮತ್ತು ಅನುಭವ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ದಾವಣಗೆರೆಯ ಹಿರಿಯ ಇಎನ್‌ಟಿ ಕನ್ಸಲ್ಟಂಟ್ ಡಾ.ಎ.ಎಂ. ಶಿವಕುಮಾರ ಮಾತನಾಡಿ, ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ವಿಶೇಷವಾಗಿ ಖಾಸಗಿ ಮೆಡಿಕಲ್ ಕಾಲೇಜ್‌ಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಾಗಿವೆ. ಆದರೆ, ಪ್ರಾಧ್ಯಾಪಕರ ಸಂಖ್ಯೆ ಹಾಗೆಯೇ ಇದೆ. ಪ್ರಾಧ್ಯಾಪಕರು ಮತ್ತು ಖಾಸಗಿ ಕನ್ಸಲ್ಟಂಟ್‌ಗಳಿಬ್ಬರೂ ತಮ್ಮ ಖಾಸಗಿ ಪ್ರಾಕ್ಟೀಸ್‌ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಎಒಐ ಕರ್ನಾಟಕ ರಾಜ್ಯ ಶಾಖೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ, ಡಾ.ಎಸ್.ಎಫ್. ಕಮ್ಮಾರ ಮಾತನಾಡಿದರು.

ಪಿಎಂಎಸ್‌ಎಸ್‌ವೈ ವೈದ್ಯಕೀಯ ಅಧೀಕ್ಷಕ ಡಾ. ರಾಜಾಶಂಕರ ಎಸ್., ಸಂಘಟನಾ ಚೇರ್ಮನ್ ಡಾ. ನೇಮಿನಾಥ ಪಾಟೀಲ, ಉಪಾಧ್ಯಕ್ಷ ಡಾ.ಎನ್.ಎಸ್. ಹಿರೇಮಠ, ಕಾರ್ಯದರ್ಶಿ ಡಾ. ರವೀಂದ್ರ ಗದಗ, ಡಾ.ಎಸ್.ವೈ. ಮುಲ್ಕಿಪಾಟೀಲ, ಯುವ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.