ರಾಮಮಂದಿರ ಮಾದರಿ ಕಲ್ಪನೆ ಮೂಡಿಸಿದ್ದ ಸಿಂಘಾಲ್

ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲಜಿ ಬಣ್ಣನೆ
ashok singhal
ಹುಬ್ಬಳ್ಳಿಯಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಅಶೋಕ ಸಿಂಘಾಲ್ 100 ವರ್ಷಗಳ ನೆನಪು-ಶತಮಾನೋತ್ಸವ’ ಕಾರ್ಯಕ್ರಮ.
Published on: 

ಹುಬ್ಬಳ್ಳಿ: ಅಶೋಕ ಸಿಂಘಾಲ್ ಅವರು ರಾಮಜನ್ಮಭೂಮಿ ಆಂದೋಲನದ ಮೂಲಕ ಹಿಂದೂ ಸಮಾಜದಲ್ಲಿ ಸಾಭಿಮಾನ ಮತ್ತು ಜಾಗೃತಿ ಚಿಗರುವಂತೆ ಮಾಡಿದರು. ರಾಮಮಂದಿರ ನಿರ್ಮಾಣದ ಕಲ್ಪನೆ ಇಲ್ಲದ ವೇಳೆ ಮಂದಿರದ ಮಾದರಿ ರೂಪಿಸಿ ಜನರಲ್ಲಿ ಅದರ ಕನಸು ಬಿತ್ತಿದರು ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲಜಿ ಬಣ್ಣಿಸಿದರು.

ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಅಶೋಕ ಸಿಂಘಾಲ್ 100 ವರ್ಷಗಳ ನೆನಪು-ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1990ರ ಕರಸೇವೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಪೊಲೀಸರ ಕಣ್ಗಾವಲಿನ ನಡುವೆಯೂ ಸಿಂಘಾಲ್ ಮುಂಚೂಣಿಯಲ್ಲಿ ನಿಂತಿದ್ದರು. ಅವರು ಗಾಯಗೊಂಡರೂ ಹಿಂದೆ ಸರಿಯದೆ ಹೋರಾಟಕ್ಕೆ ಧೈರ್ಯ ತುಂಬಿದ್ದರು. ನಾಯಕತ್ವ ಎಂದರೆ ಮುಂಚೂಣಿಯಲ್ಲಿ ನಿಲ್ಲುವುದು ಎಂಬುದನ್ನು ತಮ್ಮ ನಡೆ ಮೂಲಕ ತೋರಿಸಿದ್ದರು. ‘ಜೈ ಶ್ರೀರಾಮ್’ ಹಾಗೂ ‘ಗರ್ವ್‌ಸೇ ಕಹೋ ಹಮ್ ಹಿಂದೂ ಹೈ’ ಎಂಬ ಘೋಷಣೆಗಳನ್ನು ದೇಶದಾದ್ಯಂತ ಜನಪ್ರಿಯಗೊಳಿಸಿದರು ಎಂದು ಗುಣಗಾನ ಮಾಡಿದರು.

1990ರಲ್ಲೇ ಎಲ್‌ಆ್ಯಂಡ್‌ಟಿ ಸಂಸ್ಥೆಯ ಪ್ರಮುಖರನ್ನು ಸಂಪರ್ಕಿಸಿ, ರಾಮಮಂದಿರ ನಿರ್ಮಾಣದ ಹೊಣೆ ವಹಿಸುವಂತೆ ಮನವಿ ಮಾಡಿದ್ದರು. ಬಳಿಕ ರಾಮಮಂದಿರ ನಿರ್ಮಾಣದಲ್ಲಿ ಎಲ್‌ಆ್ಯಂಡ್‌ಟಿ ಪ್ರಮುಖ ಪಾತ್ರವಹಿಸಿತು. ಹಿಂದೂ ಸಮಾಜದಲ್ಲಿನ ಜಾತಿ, ಭೇದ ಮತ್ತು ಅಸ್ಪಶ್ಯತೆ ನಿವಾರಣೆಗೂ ಸಿಂಘಾಲ್ ಒತ್ತು ನೀಡಿದ್ದರು. ಅವರ ಶತಮಾನೋತ್ಸವ ಕೇವಲ ಸ್ಮರಣೆಗೆ ಸೀಮಿತವಾಗಬಾರದು. ಅವರ ಸಾಮಾಜಿಕ ಸಾಮರಸ್ಯತೆ, ಹಿಂದೂ ಸಮಾಜದ ಸಂಘಟನೆ ಮತ್ತು ಸೇವೆಯ ಚಿಂತನೆ ಮುಂದುವರಿಸುವ ಸಂಕಲ್ಪವಾಗಬೇಕು ಎಂದು ಕರೆ ನೀಡಿದ್ದರು ಎಂದು ವಿವರಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ವಾತಾವರಣವನ್ನು ಬದಲಿಸಿ, ಸಮಾಜದಲ್ಲಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಮೂಡಿಸಿದವರು ಅಶೋಕ ಸಿಂಘಾಲ್. ರಾಮಜನ್ಮಭೂಮಿ ಆಂದೋಲನವನ್ನು ಜನಾಂದೋಲನವಾಗಿ ರೂಪಿಸಿದ ಅವರ ಕೊಡುಗೆ ಶಾಶ್ವತ ಸ್ಮರಣೀಯ ಎಂದರು.

ಬ್ರಿಟಿಷರ ಕಾಲದಿಂದ ಭಾರತದ ಸಂಸ್ಕೃತಿ, ಜ್ಞಾನ ಪರಂಪರೆ ಹಾಗೂ ನಂಬಿಕೆಗಳ ಬಗ್ಗೆ ಕೀಳರಿಮೆ ಮೂಡಿಸುವ ಪ್ರಯತ್ನ ನಡೆಯಿತು. ಪರಿಣಾಮ ಹಿಂದೂ ಎಂದು ಗುರುತಿಸಿಕೊಳ್ಳಲೂ ಜನರು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಚಾರಿಕ ಪ್ರಯತ್ನಗಳಿಗೆ ಸಿಂಘಾಲ್ ಅವರ ಸಂಘಟನಾ ಶಕ್ತಿ ಸೇರಿತು. ಆ ಬಳಿಕ ಇಂಥ ಮನಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಶುರುವಾಯಿತು ಎಂದರು.

ರಾಮಮಂದಿರ ವಿಚಾರದಲ್ಲಿ ನನ್ನ ರಾಮನಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಿಸುವ ಮೂಲಕ ಆಂದೋಲನವನ್ನು ಜನ ಚಳವಳಿಯನ್ನಾಗಿ ರೂಪಿಸಿದರು. ಅವರ ನೇತೃತ್ವದಲ್ಲಿ ಲಕ್ಷಾಂತರ ಯುವಕರು ಹೋರಾಟಕ್ಕೆ ಧುಮುಕಿದರು. ರಾಮಮಂದಿರ ನಿರ್ಮಾಣ ಸೇರಿದಂತೆ ಭಾರತದ ಸಾಂಸ್ಕೃತಿಕ ಪುನರುತ್ಥಾನದ ಚಿಂತನೆಗೆ ಸಿಂಘಾಲ್ ಅವರ ಕೊಡುಗೆ ಅಪಾರ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಮುನ್ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದರು.

ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಮಾತನಾಡಿ, ಅಶೋಕ ಸಿಂಘಾಲ್ ಅವರು ತಮ್ಮ ವೈಯಕ್ತಿಕ ಜೀವನದ ಅವಕಾಶ ಬದಿಗಿಟ್ಟು ಹಿಂದೂ ಸಮಾಜ, ಸಂಸ್ಕೃತಿ ಹಾಗೂ ರಾಷ್ಟ್ರದ ಉನ್ನತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ರಾಮಜನ್ಮಭೂಮಿ ಆಂದೋಲನ ಸೇರಿದಂತೆ ದೇಶದಾದ್ಯಂತ ಹಿಂದೂ ಸಮಾಜವನ್ನು ಸಂಘಟಿಸುವಲ್ಲಿ ಸಿಂಘಾಲ್ ಅವರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

ಹುಕ್ಕೇರಿ ಹಿರೇಮಠ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಕೊಂಚೂರುಮಠದ ಶ್ರೀ ಸವಿತಾನಂದ ಸ್ವಾಮೀಜಿ ಮಾತನಾಡಿದರು. ಕರ್ನಾಟಕ ಉತ್ತರ ಪ್ರಾಂತದ ಪ್ರಮುಖ ಕೆ. ಗೋವರ್ಧನರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ಉಳ್ಕಿಹಾಳ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪ, ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net