

ಹುಬ್ಬಳ್ಳಿ: ಪ್ರೀತಿ ನಿರಾಕರಣೆ ಮಾಡಿದ್ದ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಅಪರಾಧಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನಿಗೆ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
2024ರ ಮೇ 15ರಂದು ಬೆಳಗ್ಗೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಅಂಜಲಿಯನ್ನು ಹತ್ಯೆಗೈದಿದ್ದ ಗಿರೀಶಗೆ ಐಪಿಸಿ ಸೆಕ್ಷನ್ 302ರಡಿ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಸಾಕ್ಷ್ಯ ನಾಶಪಡಿಸಿದ್ದಕ್ಕೆ 201ರಡಿ ಮೂರು ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ಹಾಗೂ ಮನೆಗೆ ಅಕ್ರಮವಾಗಿ ನುಗ್ಗಿದ್ದಕ್ಕೆ 451ರಡಿ ಎರಡು ವರ್ಷ ಶಿಕ್ಷೆ ಜತೆಗೆ 10 ಸಾವಿರ ರೂ. ದಂಡ ವಿಧಿಸಿದೆ.ಸ
ಒಟ್ಟು 45 ಸಾವಿರ ರೂ. ದಂಡದಲ್ಲಿ 43 ಸಾವಿರ ರೂ. ಅನ್ನು ಅಂಜಲಿ ಸಹೋದರಿ ಯಶೋಧಾಗೆ ಪರಿಹಾರವಾಗಿ ಹಾಗೂ 2 ಸಾವಿರ ರೂ. ಸರ್ಕಾರಕ್ಕೆ ಪಾವತಿಸುವಂತೆ ನ್ಯಾಯಾಧೀಶೆ ಪಲ್ಲವಿ ಬಿ.ಆರ್. ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಿಐಡಿ ವಿಶೇಷ ಸರ್ಕಾರಿ ಅಭಿಯೋಜಕ ಆರ್.ಕೆ. ಕಾಳೆ ವಾದ ಮಂಡಿಸಿದ್ದರು.
ನ. 21ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಪಲ್ಲವಿ ಅವರು, ಗಿರೀಶ ಸಾವಂತ ಅಪರಾಧಿ ಎಂದು ಘೋಷಿಸಿ, ಶಿಕ್ಷೆ ಪ್ರಮಾಣವನ್ನು ಮುಂದೂಡಿದ್ದರು. ಬುಧವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದರು.
ಹಿನ್ನೆಲೆ ಏನು?: ನಗರದ ಯಲ್ಲಾಪುರ ಓಣಿಯ ನಿವಾಸಿ ಗಿರೀಶ, ಅಂಜಲಿಯನ್ನು ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ. ಪ್ರೀತಿ ಪ್ರಸ್ತಾಪ ನಿರಾಕರಿಸಿದ್ದ ಅಂಜಲಿ ಮೇಲೆ ಗಿರೀಶ ಕುಪಿತನಾಗಿದ್ದ. 2024ರ ಮೇ 15ರಂದು ಬೆಳಗ್ಗೆ 5ರಿಂದ 5.30ರ ನಡುವೆ ವೀರಾಪುರ ಓಣಿಯ ಕರಿಯಮ್ಮನ ದೇವಸ್ಥಾನ ಬಳಿಯ ಅಂಜಲಿ ಮನೆಗೆ ನುಗ್ಗಿ ಮಲಗಿದ್ದಾಕೆಯನ್ನು ಎಬ್ಬಿಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಘಟನೆಯ ಗಂಭೀರತೆ ಅರಿತ ಅಂದಿನ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಅಂಜಲಿ ಮನೆಗೆ ಆಗಮಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರು.
ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಹಾಗೂ ಎಡಿಜಿಪಿ ಬಿ.ಕೆ. ಸಿಂಗ್ ಮಾರ್ಗದರ್ಶನದಲ್ಲಿ ಎಸ್ಪಿ ಎನ್. ವೆಂಕಟೇಶ, ಡಿವೈಎಸ್ಪಿ ಎಂ.ಎಚ್. ಉಮೇಶ ತನಿಖೆ ನಡೆಸಿದ್ದರು. ಪರಾರಿಯಾಗಿದ್ದ ಗಿರೀಶನನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.
ಸಿಐಡಿ ಅಧಿಕಾರಿಗಳು ಒಟ್ಟು 435 ಪುಟಗಳ ದೋಷಾರೋಪ ಪಟ್ಟಿಯಲ್ಲಿ 85 ಸಾಕ್ಷಿಗಳ ವಿವರಣೆಯನ್ನು ಕೋರ್ಟ್ಗೆ ಸಲ್ಲಿಸಿದ್ದರು. 18 ಮುದ್ದೆ ಮಾಲು ಹಾಗೂ 179 ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಮಾರ್ಚ್ 2026ರಿಂದ ವಿಚಾರಣೆ ತೀವ್ರಗೊಂಡು ಈಗ ಶಿಕ್ಷೆ ಪ್ರಮಾಣ ಪ್ರಕಟವಾಗಿದೆ.