ಜೀವ ಹಿಂಡುತಿದೆ ಯಾದವಾಡ ರಸ್ತೆ

ತಗ್ಗು-ಗುಂಡಿಗಳ ಅಬ್ಬರ ಸಂಕಷ್ಟದಲ್ಲೇ ಸಂಚಾರ ಜನಪ್ರತಿನಿಧಿಗಳು, ಅಧಿಕಾರಿಗಳ ಅನಾದರ
Due to the presence of potholes on the damaged Uppinabetageri–Yadawada road, private vehicles are driving on the wrong side (on the right-hand side).
ಉಪ್ಪಿನಬೆಟಗೇರಿ- ಯಾದವಾಡ ಹಾಳಾದ ರಸ್ತೆಯಲ್ಲಿ ತಗ್ಗುಗಳಿರುವುದರಿಂದ ಖಾಸಗಿ ವಾಹನಗಳು ರಾಂಗ್‌ಸೈಡ್ (ಬಲಬದಿಯಿಂದ) ಚಲಿಸುತ್ತಿರುವುದು.
Published on: 

ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ

ನಿತ್ಯ ಉಪ್ಪಿನಬೆಟಗೇರಿಯಿಂದ ಧಾರವಾಡ, ಬೈಲಹೊಂಗಲ ಸೇರಿದಂತೆ ಅನೇಕ ಕಡೆಗಳಿಗೆ ತೆರಳಲು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯ ಸೃಷ್ಟಿಯಾಗಿದೆ. ಜೀವ ತೆಗೆಯಲು ಯಮರಾಜ ಕಾದು ಕುಳಿತಂತಿರುವ ಈ ರಸ್ತೆಯಲ್ಲಿ ರಾತ್ರಿಯಲ್ಲ, ಹಗಲಲ್ಲೂ ಸಂಚರಿಸುವುದು ದುಸ್ತರವಾಗಿದೆ.

ಚಿಕ್ಕಾಲಗುಡ್ಡ- ಪಡಗುದ್ರಿ ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆ ಅಕ್ಷರಶಃ ಪ್ರಯಾಣಿಕರ ಜೀವ ಹಿಂಡುವಂತಿದೆ. ಉಪ್ಪಿನಬೆಟಗೇರಿ ಗ್ರಾಮದಿಂದ ಧಾರವಾಡಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಸುಮಾರು 3 ಕಿ.ಮೀ. ರಸ್ತೆಯು ತಗ್ಗು ಗುಂಡಿಗಳಿಂದ ಕೂಡಿದ್ದು, ವಾಹನ ಸವರಾರರು ಪರಿತಪಿಸುವಂತಾಗಿದೆ. ಗರ್ಭಿಣಿಯರು, ವೃದ್ಧರು, ಸೇರಿದಂತೆ ತುರ್ತು ಚಿಕಿತ್ಸೆಗೆಂದು ರೋಗಿಗಳನ್ನು ಕರೆದುಕೊಂಡು ಧಾರವಾಡಕ್ಕೆ ಹೋಗುವ ಆಂಬುಲೆನ್ಸ್ ವಾಹನಗಳಿಗೆ ಈ ರಸ್ತೆಯ ಪ್ರಯಾಣ ಸುಲಭವಿಲ್ಲ. ದಿನ ತುಂಬಿದ ಗರ್ಭಿಣಿಯರಿಗೆ ವಾಹನಗಳಲ್ಲೆ ಹೆರಿಗೆಯಾದರೂ ಅಚ್ಚರಿಯಿಲ್ಲ ಎನ್ನುವಂತಿದೆ ಇಲ್ಲಿನ ರಸ್ತೆಯ ಸಂಚಾರ.

ಉಪ್ಪಿನಬೆಟಗೇರಿಯಿಂದ 17 ಕೀಮಿ ಇರುವ ಧಾರವಾಡಕ್ಕೆ ಕೇವಲ 20 ನಿಮಿಷದೊಳಗೆ ಸಂಚರಿಸುವ ವಾಹನಗಳು ಇದೀಗ ಅಂದಾಜು 40 ನಿಮಿಷ ಕ್ರಮಿಸಬೇಕಾಗಿದೆ. ಪ್ರತಿ ನಿತ್ಯ ನೂರಾರು ವಾಹನಗಳು ಇದೇ ರಸ್ತೆಯನ್ನು ಅವಲಂಭಿಸಿದ್ದರೂ ರಸ್ತೆಯನ್ನು ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿರುವುದಾದರು ಏಕೆ ಎಂಬ ಪ್ರಶ್ನೆ ಪ್ರಯಾಣಿಕರು ಹಾಗೂ ವಾಹನ ಚಾಲಕರಿಂದ ಕೇಳಿ ಬರುತ್ತಿದೆ.

ಮತ್ತೊಂದೆಡೆ ಈ ರಸ್ತೆಯ ಮೂಲಕ ಧಾರವಾಡಕ್ಕೆ ಪ್ರತಿದಿನ ನೂರಾರು ಕೂಲಿ ಕಾರ್ಮಿಕರು ತಮ್ಮ ದ್ವಿಚಕ್ರ ವಾಹನಗಳ ಮೂಲಕ ಹೋಗುತ್ತಾರೆ. ರಸ್ತೆಯಲ್ಲಿ ದೊಡ್ಡ ದೊಡ್ಡ ತಗ್ಗು ಮತ್ತು ಗುಂಡಿಗಳು ಸಾಲು ಸಾಲಾಗಿ ಬಿದ್ದಿದ್ದರಿಂದ ಅವುಗಳನ್ನು ತಪ್ಪಿಸಲು ಹರಸಾಹಸ ಪಡಬೇಕಾಗಿದೆ. ಇಲ್ಲಿರುವ ಮೂರು ಕಿಮೀ ಹದಗೆಟ್ಟ ರಸ್ತೆ ಕ್ರಮಿಸುವ ವಾಹನಗಳ ಚಾಲಕರು ಬಹುತೇಕ ರಾಂಗ್ ಸೈಡ್ (ಎಡಬದಿ ರಸ್ತೆ ಹದಗೆಟ್ಟಿದ್ದರಿಂದ ಬಲಬದಿಯಿಂದ) ತಮ್ಮ ವಾಹನಗಳನ್ನು ಚಲಾಯಿತ್ತಾರೆ. ಇದರಿಂದ ಎದುರು ಬರುವ ವಾಹನಗಳ ಚಾಲಕರು ರಸ್ತೆಗಾಗಿ ಜಗಳ ಮಾಡುವ ದೃಶ್ಯ ಸಾಮಾನ್ಯವಾಗಿದೆ.

ಇನ್ನು ರಾತ್ರಿ ವೇಳೆಯಂತು ಹದಗೆಟ್ಟ ಮೂರು ಕಿ.ಮಿ ರಸ್ತೆಯನ್ನು ಕ್ರಮಿಸುವುದು ಸಾಹಸದ ಕೆಲಸವಾಗಿದೆ. ಒಂದು ತಗ್ಗು ತಪ್ಪಿಸುವಷ್ಟರಲ್ಲಿ ಮುಂದೆ ಮತ್ತೊಂದು ತಗ್ಗು ಯಮನಂತೆ ಬಾಯ್ತೆರೆದು ಕಾಯುತ್ತಿರುತ್ತದೆ. ಬಹುತೇಕ ದ್ವಿಚಕ್ರ ವಾಹನಗಳ ಮೂಲಕ ತೆರಳುವ ಪ್ರಯಾಣಿಕರು ಇಲ್ಲಿ ಬೀಳುವುದು, ಏಳುವುದು ಸಾಮಾನ್ಯವಾಗಿದೆ. ಕೆಲ ವರ್ಷಗಳ ಹಿಂದೆ ಈ ರಸ್ತೆಯನ್ನು ಇಲ್ಲಿರುವ ಮೂರು ಕೀಮಿ ಹೊರತುಪಡಿಸಿ ನೂತನವಾದ ರಸ್ತೆ ನಿರ್ಮಿಸಿದ್ದರು. ಇದು ಯಾವ ಕಾರಣಕ್ಕೆ ಅಭಿವೃದ್ಧಿ ಹೊಂದಿಲ್ಲ ಎಂಬುವುದೇ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ಏನೇ ಆಗಲಿ ಆದಷ್ಟು ಬೇಗನೆ ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

ಶಾಸಕರ ನಿರ್ಲಕ್ಷೃ

ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯ ದುಃಸ್ಥಿತಿ ಶಾಸಕರ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸಿದೆ. ಅವರು, ಧಾರವಾಡ ಜಿಲ್ಲೆಗೆ ಆಗಮಿಸಿದ ನಂತರ ಎರಡು ಬಾರಿ ಇದೇ ಹದಗೆಟ್ಟ ರಸ್ತೆಯ ಮೂಲಕ ಉಪ್ಪಿನಬೆಟಗೇರಿಗೆ ಆಗಮಿಸಿದ್ದಾರೆ. ಆದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ವಿಷಾದನೀಯ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾದವಾಡ-ಉಪ್ಪಿನಬೆಟಗೇರಿ ರಸ್ತೆ ನಿರ್ಮಾಣಕ್ಕೆ ಆನ್‌ಲೈನ್ ಮೂಲಕ ಟೆಂಡರ್ ಕರೆದಿದ್ದು, ಒಂದು ವಾರದೊಳಗೆ ಟೆಂಡರ್ ಆಗಲಿದೆ. ಒಂದೆರಡು ದಿನಗಳಲ್ಲಿ ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಲಿದ್ದು, ನಂತರ ನೂತನ ರಸ್ತೆ ನಿರ್ಮಾಣವಾಗಲಿದೆ.

ರಾಘವೇಂದ್ರ ದೊಡಮನಿ, ಲೋಕೋಪಯೋಗಿ ಇಲಾಖೆ ಎಇಇ, ಧಾರವಾಡ