ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲ

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆರೋಪ * ನವಲಗುಂದದಲ್ಲಿ ಬಿಜೆಪಿ ಪ್ರತಿಭಟನೆ
The BJP staged a protest in Navalgunda, demanding the fulfillment of various demands, and submitted a memorandum to the government through Tahsildar Sudheer Sahukar. Shanker Patil Munenakoppa, Gangappa Manavi, Devaraja Dadibhavi, Annappa Bagi, Rayanagowda Patil, and others were present.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನವಲಗುಂದದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುಧೀರ ಸಾಹುಕಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಂಕರ ಪಾಟೀಲ ಮುನೇನಕೊಪ್ಪ, ಗಂಗಪ್ಪ ಮನವಿ, ದೇವರಾಜ ದಾಡಿಬಾವಿ, ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ ಇತರರು ಇದ್ದರು.
Published on: 

ನವಲಗುಂದ: ರೈತರು ಹಾಗೂ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆರೋಪಿಸಿದರು.

ವಿವಿದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರ ಅವರು, ಭೀಕರ ಬರಗಾಲ ಎದುರಿಸುತ್ತಿರುವ ರೈತರಿಗೆ ಸರ್ಕಾರ ಕೇವಲ 5 ಸಾವಿರ ರೂಪಾಯಿ ಪರಿಹಾರ ನೀಡಿದೆ. ಸರ್ಕಾರದ ಬಳಿ ಹಣವಿಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅನ್ನದಾತರ ಸಮಸ್ಯೆಗಳಿಗೆ ಸರ್ಕಾರ ಹೇಗೆ ಪರಿಹಾರ ಕಲ್ಪಿಸುತ್ತದೆ ಎಂದು ಪ್ರಶ್ನಿಸಿದರು. ಅಲ್ಲದೆ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಸರ್ಕಾರ ಮುತುವರ್ಜಿ ವಹಿಸುತ್ತಿಲ್ಲ. ಕಬ್ಬಿನ ದರ ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ. ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೂ ಸ್ಪಂದನೆ ದೊರೆಯುತ್ತಿಲ್ಲ. ಹೀಗಾಗಿ ಇದು ರೈತರು ಹಾಗೂ ಮಹಿಳೆಯರ ವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಪ್ರವಾಹ ಮತ್ತು ಬರಗಾಲ ಉಂಟಾದಾಗ ನೀಡುತ್ತಿದ್ದ ಪರಿಹಾರವನ್ನೇ ಈಗಲೂ ನೀಡಬೇಕು. ಸತತವಾಗಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ಅಧಿವೇಶನ ನಡೆಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಕ್ಷೇತ್ರದ ಹಾಲಿ ಶಾಸಕರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮನೆ ಕಳೆದುಕೊಂಡ ಯಾರಾದರು ಒಬ್ಬರಿಗೆ ಐದು ಲಕ್ಷ ರೂ. ಪರಿಹಾರ ನೀಡಿದ್ದರೆ, ಅವರ ಮನೆಗೆ ಹೋಗಿ ಸತ್ಕಾರ ಮಾಡುತ್ತೇನೆ ಎಂದು ಮುನೇನಕೊಪ್ಪ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಈ ಭಾಗದಲ್ಲಿ ಭೀಕರ ಕ್ಷಾಮ ಆವರಿಸಿದೆ. ಮಲಪ್ರಭಾ ನದಿಯಲ್ಲಿ 14 ಟಿಎಂಸಿ ನೀರು ಲಭ್ಯವಿದ್ದರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಸಾರ್ವಜನಿಕರ ಹಾಗೂ ರೈತರ ಹಿತದೃಷ್ಟಿಯಿಂದ ಇನ್ನೂ 15 ದಿನಗಳ ಕಾಲ ಕಾಲುವೆಗಳಿಗೆ ನೀರು ಹರಿಸಬೇಕು. ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಗಣಪತಿ ದೇವಸ್ಥಾದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬಿದಿಗಳಲ್ಲಿ ಸಾಗಿತು. ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಿಂಗಪ್ಪ ಸುತಗಟ್ಟಿ, ಮಂಜುನಾಥ ಗಣಿ, ಅಂದಾನಯ್ಯ ಹಿರೇಮಠ, ಷಣ್ಮುಖ ಗುರಿಕಾರ, ಸಿದ್ದಣ್ಣ ಕಿಟಗೇರಿ, ಸಾಯಿಬಾಬಾ ಆನೆಗುಂದಿ, ರಾಜಶೇಖರ ಕಂಪ್ಲಿ, ದೇವರಾಜ ದಾಡಿಬಾವಿ, ಅಣ್ಣಪ್ಪ ಬಾಗಿ, ಗಂಗಣ್ಣ ಶಂಕರಗೌಡ್ರ ಬಾಳನಗೌಡ್ರ, ಮಹಾದೇವಗೌಡ್ರ ಬಾಳನಗೌಡ್ರ, ಸಿದ್ದನಗೌಡ ಪಾಟೀಲ, ಶಾಂತಾದೇವಿ ನಿಡವಣಿ, ಅರುಣ ಮೆಣಸಿನಕಾಯಿ, ದುಂಡಪ್ಪ ಶೆಟ್ಟರ, ಸಂತೋಷ ಜೀವನಗೌಡ್ರ ಇತರರಿದ್ದರು.