

ಹುಬ್ಬಳ್ಳಿ: ಶಿಕ್ಷಕರು ಸಾಂಸ್ಕೃತಿಕ ಲೋಕದ ರಾಯಭಾರಿಗಳಿದ್ದಂತೆ, ಮಕ್ಕಳಲ್ಲಿ ಕೌಶಲ ಬೆಳೆಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಬೆಳಗಾವಿಯ ಕೆಎಸ್ಆರ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ವಿ. ಬೆಳಗಲಿ ಹೇಳಿದರು.
ಇಲ್ಲಿಯ ವಿದ್ಯಾನಗರ ಐಬಿಎಂಆರ್ ಬಿ.ಇಡಿ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ ಶಿಕ್ಷಕರಿಗೆ ಇದೆ. ಶಿಕ್ಷಕನಿಗೆ ಯಾವುದೇ ಧರ್ಮ, ಜಾತಿ ಇರುವುದಿಲ್ಲ. ಎಲ್ಲ ಮಕ್ಕಳೊಂದಿಗೆ ಬೆರೆತು ಉತ್ತಮ ಕಲಿಕಾ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಆರ್. ದುರ್ಗಾದಾಸ್ ಮಾತನಾಡಿ, ಇಂದಿನ ಜೀವನವು ದ್ವಂದ್ವಗಳು ಹಾಗೂ ಸಮಸ್ಯೆಗಳಿಂದ ಕೂಡಿದೆ. ಆದರೆ, ಪ್ರಯತ್ನಶಿಲರಿಗೆ ಫಲ ಇದ್ದೇ ಇರುತ್ತದೆ. ಶಿಕ್ಷಕರು ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ ಬೆಳೆಸಿಕೊಳ್ಳಬೇಕು. ಯಾವುದೇ ಕೆಲಸ ಇರಲಿ ಅದರ ಬಗ್ಗೆ ಒಂದಿಷ್ಟು ಮೊದಲೇ ತಿಳಿದುಕೊಳ್ಳಬೇಕು. ಅದರಿಂದ ವಿಷಯದ ಜ್ಞಾನ ವೃದ್ಧಿಸುತ್ತದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಕೇಂದ್ರ ಗೃಹ ಇಲಾಖೆ ಕಚೇರಿ ಅಧಿಕಾರಿ ಮಹಾಂತೇಶ ಗೌಡರ, ಶಿಕ್ಷಕರ ಮಾತುಗಳು ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ. ಹಾಗಾಗಿ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು. ಕಾಲಕ್ಕೆ ತಕ್ಕಂತೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಂಬಿಎ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಐಬಿಎಂಆರ್ ಗ್ರುಪ್ ಚೇರ್ಮನ್ ವಿನಯಚಂದ್ರ ಮಹೇಂದ್ರಕರ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಐಬಿಎಂಆರ್ ಟ್ರಸ್ಟಿ ಸುಮಾ ಮಹೇಂದ್ರಕರ ಉಪಸ್ಥಿತರಿದ್ದರು.
ಬಿ.ಇಡಿ. ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಪ್ರಕಾಶ ಇಳಕಲ್ಲ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಶಾರದಾ ಡಂಬಳ, ಪ್ರೊ. ಪ್ರವಿಣ ಟಿ. ಅತಿಥಿಗಳ ಪರಿಚಯ ಮಾಡಿದರು. ಪ್ರೊ. ಜೆ.ಕೆ. ಇಳಗೇರ ವರದಿ ವಾಚನ ಮಾಡಿದರು. ಪ್ರೊ. ಆಯೇಶಾ ಎಂ, ಪ್ರೊ. ಅಭಿಷೇಕ ಡಿ., ಮಲ್ಲಿಕಾರ್ಜುನ ಡಿ., ರತ್ನವ್ವ, ಶಾಂತಾ, ಭಾರ್ಗವಿ, ಇತರರು ನಿರ್ವಹಣೆ ಮಾಡಿದರು. ಜೆಮಿರ್ ಕೆ. ವಂದಿಸಿದರು.