ಗೌರಿ ಹುಣ್ಣಿಮೆ ಸಡಗರ ಹೆಚ್ಚಿಸುವ ಸಕ್ಕರೆ ಗೊಂಬೆಗಳು

ಕಣ್ಮನ ಸೆಳೆಯುವ ರಥ, ಆನೆ, ನವಿಲು
ಮಾರುಕಟ್ಟೆಯಲ್ಲಿ ಸಕ್ಕರೆ ಗೊಂಬೆ ಖರೀದಿಸುತ್ತಿರುವ ಮಹಿಳೆಯರು.
ಮಾರುಕಟ್ಟೆಯಲ್ಲಿ ಸಕ್ಕರೆ ಗೊಂಬೆ ಖರೀದಿಸುತ್ತಿರುವ ಮಹಿಳೆಯರು.
Published on: 

ಹುಬ್ಬಳ್ಳಿ: ದೀಪಾವಳಿ ನಂತರ ಬರುವ ಹಿಂದೂಗಳ ಸಾಂಪ್ರದಾಯಿಕ ಹಬ್ಬ ಗೌರಿ ಹುಣ್ಣಿಮೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ವಿಶಿಷ್ಟವಾಗಿ ಇದನ್ನು ಆಚರಿಸಲಾಗುತ್ತದೆ. ಮನೆಯಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಆರತಿ ಮಾಡುವುದು ಸಂಪ್ರದಾಯ.

ಈ ಸಂಪ್ರದಾಯಕ್ಕೆ ವಿಶೇಷ ಮೆರಗು ನೀಡುವ ಸಕ್ಕರೆ ಗೊಂಬೆಗಳು ಇದೀಗ ಮಾರುಕಟ್ಟೆಯಲ್ಲಿ ಕಣ್ಮನ ಸೆಳೆಯುತ್ತಿವೆ. ಈ ಸಕ್ಕರೆ ಗೊಂಬೆಗಳನ್ನು ತಟ್ಟೆಯಲ್ಲಿ ಇಟ್ಟು ದೇವಿಗೆ ಆರತಿ ಮಾಡುವುದು ನಡೆದುಕೊಂಡು ಸಂಪ್ರದಾಯ.

ಉತ್ತರ ಕರ್ನಾಟಕ ಭಾಗದಲ್ಲಿ ಗೌರಿ ಹುಣ್ಣಿಮೆ ಸಂಭ್ರಮ ಹೆಚ್ಚಾಗಿ ಕಂಡು ಬರುತ್ತದೆ. ಧಾರವಾಡ ಜಿಲ್ಲೆಯಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗೌರಮ್ಮನ ಪೂಜೆ, ಜನಪದ ಹಾಡು, ಕೋಲಾಟ ಸಡಗರದ ನಡುವೆ ಸಕ್ಕರೆ ಗೊಂಬೆಗಳ ಆರತಿ ಮಾಡುವುದು ಪ್ರಮುಖ ಆಕರ್ಷಣೆ.

ಮಂಗಳವಾರ ನಡೆಯಲಿರುವ ಗೌರಿ ಹುಣ್ಣಿಮೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆಯ ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಸಕ್ಕರೆ ಗೊಂಬೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

ಪುಟ್ಟ ಆನೆ, ಒಂಟೆ, ಕುದುರೆ, ಮತ್ತೊಂದೆಡೆ ಭವ್ಯ ರಥ, ದೇವಸ್ಥಾನ, ಗೋಪುರ, ಮಂಟಪಗಳ ಮಾದರಿಯ ಸಕ್ಕರೆ ಗೊಂಬೆಗಳು ಆಕರ್ಷಕವಾಗಿವೆ. ಪೌರಾಣಿಕವಾಗಿ ಶಿವಪಾರ್ವತಿ, ರಾಮಸೀತೆ, ಹನುಮಂತ, ಬಸವಣ್ಣ, ಕೃಷ್ಣನ ಆಕೃತಿಗಳೂ ಕಂಡು ಬರುತ್ತವೆ. ನವಿಲು, ಗಿಳಿ ಸೇರಿದಂತೆ ವಿವಿಧ ಪ್ರಾಣಿಪಕ್ಷಿಗಳ ಗೊಂಬೆಗಳೂ ಇವೆ.

ಇಂತಹ ಸಕ್ಕರೆ ಗೊಂಬೆಗಳನ್ನು ಮಕ್ಕಳು ತಟ್ಟೆಯಲ್ಲಿ ಇಟ್ಟುಕೊಂಡು ಗೌರಿಯನ್ನು ಪ್ರತಿಷ್ಠಾಪನೆ ಮಾಡಿದ ಮನೆಗಳಿಗೆ ಹೋಗಿ ಆರತಿ ಮಾಡಿ ಬರುತ್ತಾರೆ.

ತಯಾರಿಕೆ ವಿಶೇಷತೆ: ಸಕ್ಕರೆ ಗೊಂಬೆಗಳ ತಯಾರಿಕೆಯು ಒಂದು ವಿಶೇಷ ಕಲೆ. ಶುದ್ಧ ಸಕ್ಕರೆಗೆ ಸೂಕ್ತ ಪ್ರಮಾಣದಲ್ಲಿ ನೀರು, ನಿಂಬೆರಸ, ಹಾಲು ಹಾಗೂ ಏಲಕ್ಕಿ ಸೇರಿಸಿ ಒಲೆಯ ಮೇಲೆ ಕಾಯಿಸಲಾಗುತ್ತದೆ. ನಂತರ ಸಿದ್ಧಪಡಿಸಿದ ಸಕ್ಕರೆ ಪಾಕವನ್ನು ವಿವಿಧ ಆಕೃತಿಗಳಿರುವ ಮರದ ಅಚ್ಚುಗಳಿಗೆ ಸುರಿಯಲಾಗುತ್ತದೆ. ಕೆಲ ಸಮಯದ ಬಳಿಕ ಅಚ್ಚುಗಳನ್ನು ಬಿಡಿಸಿದಾಗ ಆಕರ್ಷಕ ಗೊಂಬೆಗಳು ರೂಪುಗೊಳ್ಳುತ್ತವೆ.

ಹುಬ್ಬಳ್ಳಿಯ ಮಾರುಕಟ್ಟೆ ಪ್ರದೇಶ, ಗ್ರಾಮೀಣ ಭಾಗದಲ್ಲಿ ಇಂತಹ ಅಚ್ಚುಗಳನ್ನು ಇಟ್ಟುಕೊಂಡು ಗೊಂಬೆ ತಯಾರು ಮಾಡಲಾಗುತ್ತದೆ. ಅಚ್ಚಬಿಳುಪಿನ ಸಕ್ಕರೆ ಗೊಂಬೆಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಂಪು, ಹಳದಿ, ಕೇಸರಿ, ಗುಲಾಬಿ ಹಾಗೂ ಹಸಿರು ಬಣ್ಣಗಳಲ್ಲಿಯೂ ವಿವಿಧ ವಿನ್ಯಾಸದ ಗೊಂಬೆಗಳು ಸಿದ್ಧವಾಗಿವೆ.

ಆರತಿ ತಟ್ಟೆ: ಗೌರಿ ಹುಣ್ಣಿಮೆ ದಿನದಿಂದ ಐದು ದಿನಗಳವರೆಗೆ ಆರತಿ ಮಾಡುವುದು ವಾಡಿಕೆ. ಮಹಿಳೆಯರು ಮತ್ತು ಮಕ್ಕಳು ಸಕ್ಕರೆ ಗೊಂಬೆಗಳನ್ನು ಆರತಿ ತಟ್ಟೆಯಲ್ಲಿ ಸುಂದರವಾಗಿ ಜೋಡಿಸಿಕೊಂಡು ಅವುಗಳ ಜತೆಗೆ ಹೂವು, ದೀಪಗಳನ್ನು ಇಟ್ಟು ಗೌರಮ್ಮನಿಗೆ ಆರತಿ ಬೆಳಗುತ್ತಾರೆ. ಸಂಜೆ ವೇಳೆ ಗೌರಮ್ಮನನ್ನು ಪ್ರತಿಷ್ಠಾಪಿಸಿರುವ ಮನೆಗಳಿಗೆ ತೆರಳಿ ಭಕ್ತಿಯಿಂದ ಆರತಿ ಮಾಡಿ ಬೇಡಿಕೊಳ್ಳುತ್ತಾರೆ. ಜನಪದ ಹಾಡುಗಳನ್ನು ಹಾಡುವುದು ಅನೇಕ ಕಡೆಗಳಲ್ಲಿ ಕಂಡು ಬರುತ್ತದೆ.

ಮದುವೆ ನಿಶ್ಚಯವಾದ ಹೆಣ್ಣುಮಕ್ಕಳ ಪಾಲಿಗೂ ಇದು ವಿಶೇಷ ಹಬ್ಬ. ಮದುವೆ ನಿಶ್ಚಯ ಮಾಡಿಕೊಂಡ ವರನ ಕಡೆಯವರು ಕನ್ಯೆಯ ಮನೆಗೆ ಸಕ್ಕರೆ ಗೊಂಬೆ, ಹೂವಿನ ದಂಡಿ, ಸೀರೆ, ಕುಪ್ಪಸ ಸೇರಿದಂತೆ ಉಡುಗೊರೆಗಳನ್ನು ಕೊಂಡೊಯ್ಯುವ ಸಂಪ್ರದಾಯ. ಮದುವೆಯಾಗಿ ಗಂಡನ ಮನೆಗೆ ಹೊಸದಾಗಿ ಹೋದ ಹೆಣ್ಣುಮಕ್ಕಳಿಗೂ ತವರು ಮನೆಯಿಂದ ಸಕ್ಕರೆ ಗೊಂಬೆ ಹಾಗೂ ಹೂವಿನ ದಂಡಿ ಕಳುಹಿಸುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಲಾಗುತ್ತದೆ.

ಇಂತಹ ವಿಶಿಷ್ಟ ಸಂಪ್ರದಾಯದ ಗೌರಿ ಹುಣ್ಣಿಮೆಯನ್ನು ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ.

ಬೆಲೆಯೂ ಹೆಚ್ಚಳ: ಈ ವರ್ಷ ಸಕ್ಕರೆ ಗೊಂಬೆಗಳು ಒಂದಿಷ್ಟು ತುಟ್ಟಿಯಾಗಿವೆ. ಸಕ್ಕರೆ ದರ ಹೆಚ್ಚಾಗಿರುವುದು ಇದಕ್ಕೆ ಕಾರಣ. ಮೊದಲೆಲ್ಲ ಕೆಜಿ ಸಕ್ಕರೆ ಗೊಂಬೆಗೆ 50ರಿಂದ 60 ರೂ. ಇದ್ದದ್ದು, ಈಗ ನೂರು ರೂಪಾಯಿ ಗಡಿ ದಾಟಿದೆ.