(siddarudha) ವಿಜೃಂಭಣೆಯ ಸಿದ್ಧಾರೂಢರ ರಥೋತ್ಸವ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರ ಮಧ್ಯೆ ಸೋಮವಾರ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರ ಮಧ್ಯೆ ಸೋಮವಾರ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
Published on
ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಸಿದ್ಧಾರೂಢರ (siddarudha) ರಥೋತ್ಸವ ನಗರದ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರ ಮಧ್ಯೆ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ರಥವು ಮುಖ್ಯಬೀದಿಯಲ್ಲಿ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದು ಭಕ್ತಿ ಮೆರೆದರು. ‘ಶ್ರೀ ಸಿದ್ಧಾರೂಢ ಮಹಾರಾಜ್‌ಕೀ ಜೈ’ ಎನ್ನುವ ಭಕ್ತರ ಘೋಷಣೆ ಎಲ್ಲೆಡೆ ಮೊಳಗಿತು. ‘ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ’ ಎನ್ನುವ ಹಾಡುಗಳನ್ನು ಭಕ್ತರು ಹಾಡಿದರು. ವಿವಿಧ ವಾದ್ಯ ಮೇಳಗಳು ರಥೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದವು.
ಶ್ರೀ ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್. ಭಾರತಿ ರಥೋತ್ಸವಕ್ಕೆ ಚಾಲನೆ ನೀಡಿದರು. ಉಭಯ ಶ್ರೀಗಳ ಮೂರ್ತಿ ಹೊತ್ತು ಸಾಗಿದ ರಥವು, ಶ್ರೀಮಠದಿಂದ ಹೊರಟು ಮಹಾದ್ವಾರ ತಲುಪಿ ಮರಳಿ ಶ್ರೀಮಠದ ಆವರಣ ತಲುಪಿತು.
ಬೆಳಗ್ಗೆಯಿಂದ ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥರೂಢರ ಮೂರ್ತಿಗೆ ಅಭಿಷೇಕ, ಪೂಜೆ, ಅಲಂಕಾರ, ನೈವೇದ್ಯ ಸಮರ್ಪಿಸಲಾಯಿತು. ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿ, ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದು ಕೃತಾರ್ಥರಾದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು, ಭಜನಾ ಮಂಡಳಿಗಳು, ಉಭಯ ಶ್ರೀಗಳ ಕುರಿತು ಭಜನೆ ಪದಗಳನ್ನು ಹಾಡಿ ಭಕ್ತಿ ಮೆರೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net