ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದಾದ್ಯಂತ ಎಲ್ಲ ರೈಲು ನಿಲ್ದಾಣಗಳಲ್ಲಿ ರೈಲ್ ಜನ ಸಂವಾದ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು.
ವಲಯ ಹಾಗೂ ವಿಭಾಗದ ಹಿರಿಯ ರೈಲ್ವೆ ಅಧಿಕಾರಿಗಳು ಪ್ರಯಾಣಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ರೈಲ್ವೆ ಸೇವೆಗಳು ಹಾಗೂ ಪ್ರಯಾಣಿಕರಿಗೆ ಒದಗಿಸಲಾಗಿರುವ ಸೌಲಭ್ಯಗಳ ಕುರಿತು ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಿದರು.
ಬೆಳಗಾವಿ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ ಅವರು ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಯಾಣಿಕರು ನಿಲ್ದಾಣದ ಸ್ವಚ್ಛತೆ, ಸೂಚನಾ ಫಲಕಗಳು, ರ್ಪಾಂಗ್ ಸೌಲಭ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ರೈಲು ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ಕುರಿತು ಪಿ. ಅನಂತ ಅವರು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿದರು.
ಬಾಗಲಕೋಟೆ ರೈಲು ನಿಲ್ದಾಣದಲ್ಲಿ ರೈಲ್ ಜನ ಸಂವಾದಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.
ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕ ಪ್ರೇಮ ಚಂದ್ರ ನೇತೃತ್ವದಲ್ಲಿ ರೈಲ್ ಜನ ಸಂವಾದ ಏರ್ಪಡಿಸಲಾಗಿತ್ತು. ಧಾರವಾಡ, ಗದಗ, ಲೋಂಡಾ ಮತ್ತು ವಿಜಯಪುರ ಸೇರಿ ಎಲ್ಲ ನಿಲ್ದಾಣಗಳಲ್ಲಿ ರೈಲ್ ಜನ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.