ಹುಬ್ಬಳ್ಳಿ: ನಾಡಿನ ಹಿರಿಯ ವಿದ್ವಾಂಸರು, ಸಾಹಿತಿಗಳಾಗಿದ್ದ ಪ್ರೊ. ಶ್ರೀನಿವಾಸ ತೋಫಖಾನೆ ಅವರು ಅಂತಃಚಕ್ಷು ಸದಾ ತೆರೆದಿದ್ದ ವಿಶೇಷ ವ್ಯಕ್ತಿಯಾಗಿದ್ದರು, ಅವರ ಧಾರಣ ಶಕ್ತಿ ಅಪಾರವಾಗಿತ್ತು ಎಂದು ಹಿರಿಯ ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.
ಇಲ್ಲಿಯ ಸವಾಯಿ ಗಂಧರ್ವ ಹಾಲ್ನಲ್ಲಿ ತೋಫಖಾನೆ ಅವರ ಅಭಿಮಾನಿಗಳು ಹಾಗೂ ಸಾಹಿತ್ಯ ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ಪ್ರೊ. ಶ್ರೀನಿವಾಸ ತೋಫಖಾನೆ ಅವರ ಶತಮಾನದ ನೆನಪು!ನಮನ! ಕಾರ್ಯಕ್ರಮದಲ್ಲಿ ಸಾಹಿತ್ಯ ಸಾಧನೆಗಳ ಕುರಿತು ಮಾತನಾಡಿದರು.
ಸಂಸ್ಕೃತ ಹಾಗೂ ಇತರ ಭಾಷೆಯಿಂದ ಅನೇಕರು ಕನ್ನಡಕ್ಕೆ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಆದರೆ, ತೋಫಖಾನೆ ಅವರು ಅನುವಾದದ ಮೂಲಕ ಕನ್ನಡದ ಸೌಧವನ್ನೇ ಕಟ್ಟಿದರು. ಅವರು ನಿಜವಾದ ಕವಿ, ಚಿಂತಕರಾಗಿದ್ದರು ಎಂದರು.
ಇಂದು ಯಾವ ಭಾಷೆಯಲ್ಲಿ ಓದಬೇಕು ಎಂಬುದೇ ಚರ್ಚಾ ವಿಷಯವಾಗಿದೆ. ಇತ್ತ ಕನ್ನಡ, ಅತ್ತ ಇಂಗ್ಲಿಷ ಯಾವುದೂ ಸರಿಯಾಗಿ ಬಾರದ ವಿಷಯ ಸ್ಥಿತಿಯಲ್ಲಿ ನಾವಿದ್ದೇವೆ. ಕವಿ ಪ್ರತಿಭೆಯುಳ್ಳ ತೋಫಖಾನೆ ಅವರು ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯವನ್ನು ಓದುತ್ತ ಹೋದಂತೆ ಬದುಕಿನಲ್ಲಿ ಧನಾತ್ಮಕ ಚಿಂತನೆ ಬರುತ್ತದೆ ಎಂದರು.
1980ರ ದಶಕದಲ್ಲಿ ಹುಬ್ಬಳ್ಳಿಗೆ ಬಂದಾಗ ತೋಫಖಾನೆ ಅವರೊಂದಿಗಿನ ಒಡನಾಟ ಸ್ಮರಿಸಿದ ವೆಂಕಟೇಶ ಅವರು, ಪ್ರೊ. ಶ್ರೀನಿವಾಸ ಅವರ ಗೀತ ಗೋವಿಂದ ನಿಜವಾದ ಭಕ್ತಿಯಿಂದ ಕೂಡಿದ ಕೃತಿಯಾಗಿದೆ. ಇಂತಹ ಕೃತಿ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು.
ಖ್ಯಾತ ವಾಗ್ಮಿ, ಸಾಹಿತಿ ಡಾ. ಜಿ.ಬಿ. ಹರೀಶ ಮಾತನಾಡಿ, ಕನ್ನಡ ಸಾಹಿತ್ಯದ ವಾಗ್ಝರಿ ಹುಟ್ಟಿದ್ದು ಧಾರವಾಡದ ನೆಲದಲ್ಲಿ. ಧೈರ್ಯವಾಗಿ ಮಾತನಾಡುವ ಕಲೆ ತೋಫಖಾನೆ ಅವರ ಬರವಣಿಗೆಯಲ್ಲಿ ಅಡಗಿದೆ. ಕನ್ನಡದ ಪದಗಳನ್ನು ಬಳಸಿ ಸಾಹಿತ್ಯ ಬರೆದರು. ಜೀವನದಲ್ಲಿ ಕಂಡಿದ್ದನ್ನು ಸಾಹಿತ್ಯದಲ್ಲಿ ಅಳವಡಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಗ್ಮಿ, ವಿದ್ವಾಂಸರಾದ ಹಿರೇಮಗಳೂರು ಕಣ್ಣನ್, ತೋಫಖಾನೆ ಅವರ ಕವಿತೆಯ ಪ್ರತಿ ಪದದಲ್ಲಿಯೂ ನಮ್ಮನ್ನು ಆರೋಗ್ಯಪೂರ್ಣ ಮಾಡುವ ಶಕ್ತಿ ಇದೆ. ಅವರು ದಾಂಪತ್ಯ ಜೀವನ ಹೇಗಿರಬೇಕು ಎಂಬುದನ್ನು ಸಾಹಿತ್ಯದಲ್ಲಿ ಹೇಳಿ ಕೊಟ್ಟಿದ್ದಾರೆ. ಸಂಸ್ಕೃತ ಹಾಗೂ ಕನ್ನಡದ ಮೇಲೆ ಅವರಿಗೆ ಅಪಾರ ಪ್ರೇಮವಿತ್ತು ಎಂದರು.
ಕನ್ನಡದ ಕೃತಿಗಳನ್ನು ದೇವರ ಮುಂದೆ ಇಡುವುದಷ್ಟೇ ಅಲ್ಲ ಕುಟುಂಬದ ಎಲ್ಲರೂ ಕೂಡಿ ಓದಬೇಕು. ಮನೆಮನೆಗೆ ಸಾಹಿತ್ಯ ಕೊಂಡೊಯ್ಯುವ ಕೆಲಸ ಆಗಬೇಕು. ಅದರಿಂದ ಕನ್ನಡದ ಮನಸ್ಸುಗಳು ಅರಳುತ್ತವೆ ಎಂದು ಹೇಳಿದರು.
ಡಾ. ರಾಘವೇಂದ್ರ ತೋಫಖಾನೆ ಸ್ವಾಗತಿಸಿದರು. ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ತೋಫಖಾನೆ ಅವರ ಜನಪ್ರಿಯ ಕೃತಿ ಮರಾಠಿಯಿಂದ ಅನುವಾದಿತ ಗೀತ ರಾಮಾಯಣ ಮರುಮುದ್ರಣವನ್ನು ಲೋಕಾರ್ಪಣೆ ಮಾಡಲಾಯಿತು.
ವಿದ್ವಾನ್ ಸುಜಯ್ ಶಾನಭಾಗ, ವಿದ್ವಾನ್ ಶ್ರೀಹರ್ಷ, ಸತೀಶ ಅವರಿಂದ ಮೂಡಿಬಂದ ಗಾಯನ, ನೃತ್ಯ, ಚಿತ್ರಗಳ ಪ್ರಸ್ತುತಿ ಪ್ರೇಕ್ಷಕರ ಗಮನ ಸೆಳೆಯಿತು.