ಜ್ಞಾನಭಕ್ತಿಗೂ ಪ್ರಾಶಸ್ತ್ಯ ದೊರೆಯಲಿ

ಮನೆ ಮನೆ ಗ್ರಂಥಾಲಯ ಉದ್ಘಾಟಿಸಿದ ಡಾ. ಮಾನಸ
ಹುಬ್ಬಳ್ಳಿ ವಿದ್ಯಾನಗರದ ಡಾ. ಮಹೇಶ ಹೊರಕೇರಿಯವರ ನಿವಾಸದಲ್ಲಿ ಏರ್ಪಡಿಸಿದ್ದ ಮನೆಮನೆ ಗ್ರಂಥಾಲಯ ಕಾರ್ಯಕ್ರಮದಲ್ಲಿ ಡಾ. ಮಾನಸ, ಡಾ. ಲಿಂಗರಾಜ ಅಂಗಡಿ, ಡಾ. ಮಹಾಂತಪ್ಪ ನಂದೂರ, ಇತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ ವಿದ್ಯಾನಗರದ ಡಾ. ಮಹೇಶ ಹೊರಕೇರಿಯವರ ನಿವಾಸದಲ್ಲಿ ಏರ್ಪಡಿಸಿದ್ದ ಮನೆಮನೆ ಗ್ರಂಥಾಲಯ ಕಾರ್ಯಕ್ರಮದಲ್ಲಿ ಡಾ. ಮಾನಸ, ಡಾ. ಲಿಂಗರಾಜ ಅಂಗಡಿ, ಡಾ. ಮಹಾಂತಪ್ಪ ನಂದೂರ, ಇತರರು ಪಾಲ್ಗೊಂಡಿದ್ದರು.
Published on: 

ಹುಬ್ಬಳ್ಳಿ: ಓದುವ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಪ್ರತಿಯೊಂದು ಕುಟುಂಬದಲ್ಲಿಯೂ ಜ್ಞಾನದ ಬೆಳಕನ್ನು ಹರಡುವ ಉದ್ದೇಶದಿಂದ ಮನೆಮನೆ ಗ್ರಂಥಾಲಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.

ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್​ನಲ್ಲಿರುವ ಕಲಘಟಗಿ ಗುಡ್​ ನ್ಯೂಸ್​ ಕಾಲೇಜಿನ ಪ್ರಾಚಾರ್ಯ ಡಾ. ಮಹೇಶ ಹೊರಕೇರಿ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಮನೆ ಮನೆ ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಮನೆಯಲ್ಲಿಯೂ ದೈವಭಕ್ತಿಗೆ ವಿಶೇಷ ಸ್ಥಾನಮಾನವಿದೆ. ಆದರೆ, ಜ್ಞಾನಭಕ್ತಿಗೆ ಅಷ್ಟೊಂದು ಮಹತ್ವ ನೀಡುತ್ತಿಲ್ಲ. ದೇವರ ಪೂಜೆಯ ಜೊತೆಗೆ ಪುಸ್ತಕಗಳ ಓದುವ ಹವ್ಯಾಸ ಬೆಳೆಸುವ ಜ್ಞಾನಭಕ್ತಿ ನಿರಂತರವಾಗಿ ನಡೆಯಬೇಕು. ಮನೆಗಳಲ್ಲಿ ಪುಟ್ಟ ಗ್ರಂಥಾಲಯ ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ, ವಿಚಾರಶೀಲತೆ ಮತ್ತು ಜ್ಞಾನಾರ್ಜನೆ ಆಸಕ್ತಿಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಪುಸ್ತಕಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪಗಳಾಗಿವೆ. ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವುದರಿಂದ ಮುಂದಿನ ಪೀಳಿಗೆಗೆ ಜ್ಞಾನ, ಸಂಸ್ಕಾರ ಮತ್ತು ಸಾಹಿತ್ಯದ ಪರಂಪರೆಯನ್ನು ಕೊಡುಗೆಯಾಗಿ ನೀಡಿದಂತಾಗುತ್ತದೆ ಎಂದರು.

ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕ ಮಾತನಾಡಿ, ಮನೆಮನೆಗಳಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು ಎಂದರು.

ಡಾ. ಮಹಾಂತಪ್ಪ ನಂದೂರ, ಡಾ. ಲಿಂಗರಾಜ ರಾಮಾಪೂರ, ವೈ.ಎಂ. ಭಗವತಿ, ಪ್ರೊ. ಕೆ.ಎಸ್​. ಕೌಜಲಗಿ, ಎಂ.ವಿ. ಕರಮರಿ, ಎಸ್​.ಎಸ್​. ಹಂಗರಕಿ, ಪ್ರೊ. ಎಚ್​.ಡಿ. ದೇವಿಹೊಸೂರ, ಎನ್​.ಎಸ್​. ಯತ್ನಳ್ಳಿ, ಡಾ. ಸುರೇಶ ಹೊರಕೇರಿ, ರತ್ನವ್ವ ಧ. ಹೊರಕೇರಿ, ಶಕುಂತಲಾ ಹೂಗಾರ, ಎಸ್​.ಎಸ್​. ಹುಡೇದ, ಇತರರು ಉಪಸ್ಥಿತರಿದ್ದರು.