

ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಮೂರು ದಶಕದಿಂದ ಆರೋಗ್ಯ ಸೇವೆ ನೀಡುತ್ತಿರುವ ನಂಜಪ್ಪ ಆಸ್ಪತ್ರೆಯು ಕೆಲ ವರ್ಷದಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಮೂರು ತಿಂಗಳಲ್ಲಿ ಹೊಸ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಆಸ್ಪತ್ರೆಯ ಹಿರಿಯ ಮೆಡಿಕಲ್ ಆಂಕೊಲಾಜಿಸ್ಟ್ ಡಾ. ಪ್ರಸಾದ ಗುನಾರಿ ತಿಳಿಸಿದರು.
ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಶುಕ್ರವಾರ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಿ ಸಾಮಾನ್ಯ ಜೀವನ ನಡೆಸುತ್ತಿರುವ ಜನರ ಪರಸ್ಪರ ಸಂವಾದ ಹಾಗೂ ಹಿರಿಯ ವೈದ್ಯರ ಮಾರ್ಗದರ್ಶನ ಕಾರ್ಯಕ್ರಮದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಮೂರು ವರ್ಷದಿಂದ ನಂಜಪ್ಪ ಆಸ್ಪತ್ರೆ ಹುಬ್ಬಳ್ಳಿಯಲ್ಲಿಯೂ ಸೇವೆ ನೀಡುತ್ತಿದೆ. ಇದೀಗ 180 ಬೆಡ್ನ ಹೊಸ ಆಸ್ಪತ್ರೆ ನಿರ್ಮಾಣವಾಗಿದ್ದು, ಇದು ಕ್ಯಾನ್ಸರ್ ಸೇರಿ ಸಮಗ್ರ ಚಿಕಿತ್ಸೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಲಿದೆ ಎಂದರು.
ಕ್ಯಾನ್ಸರ್ ಮಾತ್ರವಲ್ಲ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಲ್ಯಾಬೋರೆಟರಿ ಸೇರಿ ಸಕಲ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗುತ್ತಿದೆ. ರೋಗಿಯೊಬ್ಬರು ಆಸ್ಪತ್ರೆಗೆ ಬಂದರೆ ಅವರಿಗೆ ಎಲ್ಲ ರೀತಿಯ ವೈದ್ಯಕಿಯ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶ ಹೊಂದಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ನಂತರ ಆರೋಗ್ಯ ರಕ್ಷಣೆ, ಪೌಷ್ಟಿಕ ಆಹಾರ ಸೇವನೆ, ಜೀವನ ಶೈಲಿ ಮಾನಸಿಕ ಮನೋಬಲ ಇದ್ದರೆ ರೋಗ ಗೆಲ್ಲಬಹುದು ಎಂದರು.
ಕ್ಯಾನ್ಸರ್ ಎಂದರೆ ಭಯ ಪಡುವ ಅಗತ್ಯ ಇಲ್ಲ. ಇದು ಚಿಕಿತ್ಸೆಯಿಂದ ಗುಣವಾಗುವ ಕಾಯಿಲೆ. ಧನಾತ್ಮಕ ಚಿಂತನೆ, ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಕಾರ್ಯಕ್ರಮ ನಗರದಲ್ಲಿ ಆಯೋಜಿಸಲಾಗಿತ್ತು ಎಂದು ಅವರು ಹೇಳಿದರು.
ಇತ್ತೀಚಿನ ಸಂಶೋಧನೆಗಳ ಪ್ರಕಾರ 10 ಕ್ಯಾನ್ಸರ್ ರೋಗಿಗಳಲ್ಲಿ ಆರು ಜನ ಬೀಡಿ, ಸಿಗರೇಟ, ತಂಬಾಕು ಸೇವನೆ ಮಾಡುವವರು ಇರುತ್ತಾರೆ. ಹಾಗಾಗಿ ಇಂತಹ ಚಟಗಳಿಗೆ ಅಂಟಿಕೊಳ್ಳುವುದನ್ನು ಬಿಡಬೇಕು. ರೋಗವನ್ನು ಬೇಗ ಪತ್ತೆ ಮಾಡಿದರೆ ಶ್ರೀ ಗುಣಮುಖರಾಗುತ್ತಾರೆ ಎಂದು ಹೇಳಿದರು. ಸರ್ಜನ್ ಡಾ. ವಿನಾಯಕ ಚವ್ಹಾಣ, ಪ್ರಶಾಂತ ಕುರುಬೇಟ್, ರಿಕಿ ಖೋಡೆ ಗೋಷ್ಠಿಯಲ್ಲಿದ್ದರು.