

ಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್- ಭಾರತೀಯ ಮಾನಕ ಸಂಸ್ಥೆ) ಶಾಖೆ ವತಿಯಿಂದ ಉಡುಪಿಯ ಖಾಸಗಿ ಹೋಟೆಲ್ನಲ್ಲಿ ಪಾಲುದಾರರ (ಸ್ಟೇಕ್ ಹೋಲ್ಡರ್ಸ್) ಸಮಾವೇಶ ಏರ್ಪಡಿಸಲಾಗಿತ್ತು.
ವಿಶ್ವ ಮಾನದಂಡಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸರ್ಕಾರ, ಶಿಕ್ಷಣ ಕ್ಷೇತ್ರ, ಕೈಗಾರಿಕೆ ಮತ್ತು ಇತರ ವಲಯಗಳ ಪಾಲುದಾರರು ಪಾಲ್ಗೊಂಡಿದ್ದರು. ಅವರಿಗೆ ಗುಣಮಟ್ಟದ ಮಾನದಂಡಗಳು, ಸುಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಗ್ರ ತಿಳಿವಳಿಕೆ ನೀಡಲಾಯಿತು.
ಬಿಐಎಸ್ ವಿಜ್ಞಾನಿ-ಡಿ/ಜಂಟಿ ನಿರ್ದೇಶಕ ತುಷಾರ್ ಶರ್ಮಾ ಅವರು, ಅಂತರರಾಷ್ಟ್ರೀಯ ಮಟ್ಟದ ಮೂರು ಪ್ರಮುಖ ಮಾನದಂಡ -ನಿಗದಿಪಡಿಸುವ ಸಂಸ್ಥೆಗಳಾದ ಇಂಟರನ್ಯಾಷನಲ್ ಎಲೆಕ್ಟ್ರೋಟೆಕ್ನಿಕಲ್ ಕಮಿಷನ್ (ಐಇಸಿ), ಇಂಟರನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ (ಐಎಸ್ಒ) ಮತ್ತು ಇಂಟರನ್ಯಾಷನಲ್ ಟೆಲಿಕಮ್ಯುನಿಕೇಷನ್ ಯೂನಿಯನ್ (ಐಟಿಯು) ಇವುಗಳ ಮುಖ್ಯಸ್ಥರು ಜಂಟಿಯಾಗಿ ಹೊರಡಿಸಿ ಅನುಮೋದಿಸಿದ ವಿಶ್ವ ಮಾನದಂಡಗಳ ದಿನಾಚರಣೆಯ ಸಂದೇಶವನ್ನು ವಾಚನ ಮಾಡಿದರು.
ಅತಿಥಿಗಳಾಗಿದ್ದ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತಿಕ್ ಬಯಾಲ್ ಮಾತನಾಡಿ, ಸುಸ್ಥಿರ ಅಭಿವೃದ್ಧಿಗೆ ಮಾನದಂಡಗಳು, ಗುಣಮಟ್ಟ ಇವುಗಳ ಸಹಯೋಗದ ಮಹತ್ವವನ್ನು ವಿವರಿಸಿದರು.
ಬಿಐಎಸ್ ಹುಬ್ಬಳ್ಳಿ ಶಾಖೆ ಕಚೇರಿಯ ವಿಜ್ಞಾನಿ-ಬಿ/ಸಹಾಯಕ ನಿರ್ದೇಶಕ ಅಜಯ್ ಚಕ್ರವರ್ತಿ, ಬಿಐಎಸ್ ಮತ್ತು ಅದರ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಎನ್ಐಟಿಕೆ ಸುರತ್ಕಲ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಸವರಾಜು ಮನು ಮಾತನಾಡಿ, ಶಿಕ್ಷಣ ಕ್ಷೇತ್ರದ ದೃಷ್ಟಿಕೋನ ಮಂಡಿಸಿದರು. ಮಂಗಳೂರಿನ ಎಂಆರ್ಪಿಎಲ್ ಗುಣಮಟ್ಟ ನಿಯಂತ್ರಣ ವಿಭಾಗದ ಮುಖ್ಯ ವ್ಯವಸ್ಥಾಪಕಿ ಜ್ಯೋತಿ ಎಚ್. ಅವರು, ಕೈಗಾರಿಕಾ ವಲಯದ ಒಳನೋಟ ವಿವರಿಸಿದರು.
ಬಿಐಎಸ್ ಹುಬ್ಬಳ್ಳಿ ಶಾಖೆ ವಿಜ್ಞಾನಿ-ಇ, ನಿರ್ದೇಶಕ ಮತ್ತು ಮುಖ್ಯಸ್ಥ ಪಿ.ಎನ್. ಮುರಳಿ ಪ್ರಾಸ್ತಾವಿಕ ಮಾತನಾಡಿದರು. ವಿಜ್ಞಾನಿ-ಬಿ/ಸಹಾಯಕ ನಿರ್ದೇಶಕ ಸತೀಶಕುಮಾರ ಯಾದವ್ ವಂದಿಸಿದರು.