

ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪದ ಸನಾ ಶಿಕ್ಷಣ ಸಂಸ್ಥೆಗಳ ಸಮೂಹದ ವತಿಯಿಂದ ಗುರುವಾರ ರಾಷ್ಟ್ರೀಯ ಸಂವಿಧಾನ ದಿನವನ್ನು ಆಚರಿಸಲಾಯಿತು.
ಅತಿಥಿಯಾಗಿದ್ದ ಹುಬ್ಬಳ್ಳಿಯ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಿರುಪಮಾ ಆರ್. ಧಾಂಗ್ ಅವರು, ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಸಂರಕ್ಷಿಸುವ ಮಹತ್ವದ ಮಾರ್ಗದರ್ಶಿ ದಾಖಲೆಯಾಗಿದೆ. ಇದು ಕೇವಲ ಕಾನೂನು ಚೌಕಟ್ಟಾಗಿರದೆ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಪಾದಿಸುವ ರಾಷ್ಟ್ರದ ಮೂಲಭೂತ ಆಶಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಅರಿವಿನ ಜೊತೆಗೆ ಕರ್ತವ್ಯಗಳನ್ನೂ ಅರ್ಥಮಾಡಿಕೊಳ್ಳಬೇಕು. ಸಂವಿಧಾನಾತ್ಮಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಕಾನೂನು ಅರಿವು ಬೆಳೆಸಿಕೊಳ್ಳಬೇಕು ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಗೌರವವನ್ನು ಕಾಪಾಡಬೇಕು ಎಂದರು.
ತಾಲೂಕು ಕಾನೂನು ಸೇವಾ ಸಮಿತಿ ಪ್ಯಾನೆಲ್ ವಕೀಲೆ ಅಂಬಿಕಾ ಪಾಟೀಲ್ ಮಾತನಾಡಿ, ಸಮಾಜದ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸುವಲ್ಲಿ ಕಾನೂನು ಸೇವಾ ಸಮಿತಿಗಳ ಪಾತ್ರ ಮಹತ್ವದ್ದಾಗಿದೆ ಎಂದು ವಿವರಿಸಿದರು.
ಸನಾ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿ ಅಶ್ರಫ್ ಅಲಿ ಬಶೀರ್ ಅಹಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನವನ್ನು ಗೌರವಿಸುವುದರೊಂದಿಗೆ ಮೂಲಭೂತ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಬೇಕು. ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಕಾರಾತ್ಮಕ ಕೊಡುಗೆ ನೀಡುವ ಆದರ್ಶ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಟ್ರಸ್ಟಿ ಅಬ್ದುಲ್ ರಹಮಾನ್, ಕಾರ್ಯನಿರ್ವಾಹಕ ಟ್ರಸ್ಟಿ ತಾರಿಕ್ ಮುಜಾಹಿದ್, ಪ್ರಾಂಶುಪಾಲ ಡಾ. ಅರಿಫಾ ಮಕಂದಾರ್ ಇತರರು ಇದ್ದರು.
ನಹೀದಾ ಮನಿಯಾರ್ ಸ್ವಾಗತಿಸಿದರು. ಶಿಲ್ಪಾ ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಆಯಿಷಾ ನರಗುಂದ ವಂದಿಸಿದರು. ಸುನೈನಾ ಮತ್ತು ಅಫ್ರಾ ಕಾರ್ಯಕ್ರಮ ನಿರೂಪಿಸಿದರು.