ಮಹಾನಗರ ಪಾಲಿಕೆಗೆ 15 ದಿನಗಳ ಗಡುವು

ಮಹದಾಯಿ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ರೈತರ ಆಗ್ರಹ
ಹುಬ್ಬಳ್ಳಿಯಲ್ಲಿ ರೈತ ಸೇನಾ ಕರ್ನಾಟಕ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ವೀರೇಶ ಸೊಬರದಮಠ, ಮೇಯರ್​ ದುರ್ಗಮ್ಮ ಬೆಜವಾಡ, ಆಯುಕ್ತ ಡಾ. ರುದ್ರೇಶ ಘಾಳಿ, ಶಿವು ಮೆಣಸಿನಕಾಯಿ, ಇತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿಯಲ್ಲಿ ರೈತ ಸೇನಾ ಕರ್ನಾಟಕ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ವೀರೇಶ ಸೊಬರದಮಠ, ಮೇಯರ್​ ದುರ್ಗಮ್ಮ ಬೆಜವಾಡ, ಆಯುಕ್ತ ಡಾ. ರುದ್ರೇಶ ಘಾಳಿ, ಶಿವು ಮೆಣಸಿನಕಾಯಿ, ಇತರರು ಪಾಲ್ಗೊಂಡಿದ್ದರು.
Published on: 

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಕುಡಿಯುವ ಉದ್ದೇಶಕ್ಕಾಗಿ ಮಹದಾಯಿ ನದಿಯಿಂದ 3.92 ಟಿಎಂಸಿ ನೀರು ತರುವ ದಿಸೆಯಲ್ಲಿ ಏನು ಕ್ರಮ ಕೈಗೊಳ್ಳಬಹುದು ಎಂಬುದನ್ನು 15 ದಿನದಲ್ಲಿ ತಿಳಿಸಲು ಪಾಲಿಕೆ ಸದಸ್ಯರಿಗೆ ರೈತರು ಗಡುವು ನೀಡಿದ್ದಾರೆ.

ಇಲ್ಲಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ರೈತ ಸೇನಾ ಕರ್ನಾಟಕ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ, ಮಲಪ್ರಭಾ ನದಿಗೆ ಸವದತ್ತಿ ಬಳಿ 50 ವರ್ಷದ ಹಿಂದೆ ಕೇವಲ ಕೃಷಿಗೆ ನೀರು ಬಳಸಿಕೊಳ್ಳಲು ಡ್ಯಾಂ ಕಟ್ಟಲಾಗಿದೆ. ಆದರೆ, ಅವಳಿನಗರ ಸೇರಿ ಅನೇಕ ಜನರು ಕುಡಿಯುವ ನೀರಿಗಾಗಿ ಡ್ಯಾಂ ಆಶ್ರಯಿಸಿದ್ದಾರೆ. ಮಳೆ ಕಡಿಮೆಯಾದಾಗೊಮ್ಮೆ ಕೃಷಿಗೆ ನೀರು ಕೊಡುವುದನ್ನು ನಿಲ್ಲಿಸಲಾಗುತ್ತದೆ. ಹಾಗಾಗಿ ಮಹದಾಯಿ ನ್ಯಾಯಾಧೀಕರಣದ ಆದೇಶದಂತೆ ಮಹದಾಯಿಯಿಂದ 3.92 ಟಿಎಂಸಿ ನೀರು ತರಲು ಇರುವ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಲು ಸದಸ್ಯರು ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ದಿಸೆಯಲ್ಲಿ ರೈತರು ಹೋರಾಟಕ್ಕೆ ಸಜ್ಜಾಗಿದ್ದು, ಗಡುವಿನೊಳಗೆ ಮಹಾನಗರ ಪಾಲಿಕೆ ನಿರ್ಧಾರ ಕೈಗೊಳ್ಳದಿದ್ದರೆ ಪಾಲಿಕೆ ಆವರಣದಲ್ಲಿ ಸಹಸ್ರಾರು ರೈತರು ಸತ್ಯಾಗ್ರಹ ಹೂಡಲಿದ್ದಾರೆ ಎಂದು ಎಚ್ಚರಿಸಿದರು.

ಮಲಪ್ರಭಾ ಜಲಾಶಯದಿಂದ ಎಷ್ಟು ವರ್ಷದಿಂದ ನೀರು ಪಡೆಯಲಾಗುತ್ತಿದೆ, ಇಲ್ಲಿಯವರೆಗೆ ಎಷ್ಟು ಟಿಎಂಸಿ ಅಡಿ ನೀರು ಬಳಸಲಾಗಿದೆ, ಇದುವರೆಗೆ ಸಂಗ್ರಹವಾದ ತೆರಿಗೆ ಎಷ್ಟು, ಕೈಗಾರಿಕೆಗಳಿಗೆ ಎಷ್ಟು ನೀರು ಕೊಡಲಾಗುತ್ತಿದೆ ಎಂಬಿತ್ಯಾದಿ ಮಾಹಿತಿ ಸಂಗ್ರಹಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದರು.

ಹೋರಾಟಗಾರ ಲೋಕನಾಥ ಹೆಬಸೂರ ಮಾತನಾಡಿ, ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಹದಾಯಿ ನೀರು ಪಡೆಯುವ ಬಗ್ಗೆ ಠರಾವ್​ ಪಾಸ್​ ಮಾಡಬೇಕು. ಇಲ್ಲದೇ ಹೋದರೆ ರೈತರು ಹೋರಾಟ ತೀವ್ರಗೊಳಿಸಲಿದ್ದಾರೆ ಎಂದು ಎಚ್ಚರಿಸಿದರು.

ನವಿಲುತೀರ್ಥ ಡ್ಯಾಂ ಅಧೀಕ್ಷಕ ಇಂಜಿನಿಯರ್​ ಸುಭಾಸ ನಾಯ್ಕ ಮಾತನಾಡಿ, 1973ರಲ್ಲಿ ಕೃಷಿ ಬಳಕೆಗಾಗಿಯೇ ರೇಣುಕಾ ಜಲಾಶಯ ನಿರ್ಮಾಣವಾಗಿದ್ದು, ಒಟ್ಟು 37.73 ಟಿಎಂಸಿ ಸಾಮರ್ಥ್ಯ ಹೊಂದಿದೆ. ಇದರಲ್ಲಿ 34 ಟಿಎಂಸಿ ಬಳಕೆ ಮಾಡಬಹುದು. 24 ಟಿಎಂಸಿ ಕೃಷಿಗೆ ಮೀಸಲಿಡಲಾಗಿದೆ. ಆದರೆ, ಈ ವರ್ಷ ಕೇವಲ 15 ಟಿಎಂಸಿ ಸಂಗ್ರಹವಾಗಿದೆ. ಪ್ರತಿ ವರ್ಷ ಅವಳಿನಗರಕ್ಕೆ 2ರಿಂದ 3 ಟಿಎಂಸಿ ಪೂರೈಕೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಮಲಪ್ರಭಾದಿಂದ ನಿತ್ಯ 220 ಎಂಎಲ್​ಡಿ ನೀರು ಬಳಸಿಕೊಳ್ಳಲಾಗುತ್ತಿದೆ. ಶುಲ್ಕದಿಂದ 40 ಕೋಟಿ ರೂ. ಬರುತ್ತಿದ್ದು, ವಿದ್ಯುತ್​ ಬಿಲ್​ 70 ಕೋಟಿ ರೂ. ಆಗುತ್ತಿದೆ. ಬಿಲ್​ ಬಾಕಿ ಇದ್ದರೂ ಕುಡಿಯುವ ನೀರನ್ನು ಆದ್ಯತೆ ಮೇರೆಗೆ ಪೂರೈಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್​ ದುರ್ಗಮ್ಮ ಬೆಜವಾಡ ಮಾತನಾಡಿ, ಮಹದಾಯಿ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಮೂರ್ನಾಲ್ಕು ದಿನದಲ್ಲಿ ಮುಂದಿನ ನಿರ್ಧಾರಕ್ಕೆ ಬರಲಾಗುವುದು. ರಾಜ್ಯ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯುವ ಬಗ್ಗೆಯೂ ತೀರ್ಮಾನಿಸಲಾಗುವುದು ಎಂದರು.

ಸೇನಾ ವಕ್ತಾರ ಗುರು ರಾಯನಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಉಪಮೇಯರ್​ ರತ್ನಾಬಾಯಿ, ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಶಿವು ಹಿರೇಮಠ, ಭದ್ರಾಪುರ, ರೈತರು, ಅಧಿಕಾರಿಗಳು, ಇತರರು ಪಾಲ್ಗೊಂಡಿದ್ದರು.