ಮರದ ಅಂಬಾರಿ ಹೊತ್ತು ಸಾಗಿದ ಧನಂಜಯ

ಮೈಸೂರು ನಗರದಲ್ಲಿ ಗುರುವಾರ ಧನಂಜಯ ಆನೆ ಮರದ ಅಂಬಾರಿ ಹೊತ್ತು ಸಾಗಿತು. ಕುಮ್ಕಿ ಆನೆಗಳಾದ ಲಕ್ಷ್ಮೀ ಹಾಗೂ ಚೈತ್ರಾ ಸಾಥ್ ನೀಡಿದವು.
ಮೈಸೂರು ನಗರದಲ್ಲಿ ಗುರುವಾರ ಧನಂಜಯ ಆನೆ ಮರದ ಅಂಬಾರಿ ಹೊತ್ತು ಸಾಗಿತು. ಕುಮ್ಕಿ ಆನೆಗಳಾದ ಲಕ್ಷ್ಮೀ ಹಾಗೂ ಚೈತ್ರಾ ಸಾಥ್ ನೀಡಿದವು.
Published on: 

ಮೈಸೂರು: ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಅರಮನೆಯ ಗಜಪಡೆಯ ತಾಲೀಮು ಮತ್ತಷ್ಟು ವೇಗ ಪಡೆದು ಕೊಂಡಿದ್ದು, ಗುರುವಾರ ಧನಂಜಯ ಆನೆ ಮರದ ಅಂಬಾರಿ ಹೊತ್ತು ನಡೆಸಿದ.

ಸುಮಾರು 800 ಕೆ.ಜಿ. ತೂಕದ ಮರದ ಅಂಬಾರಿಯೊಂದಿಗೆ ಧನಂಜಯ ಅರಮನೆಯಿಂದ ಬನ್ನಿಮಂಟಪದವರೆಗೆ ಹೆಜ್ಜೆ ಹಾಕಿದ. ಧನಂಜಯನೊಂದಿಗೆ ಕುಮ್ಕಿ ಆನೆಗಳಾದ ಲಕ್ಷ್ಮೀ ಹಾಗೂ ಚೈತ್ರಾ ಹೆಜ್ಜೆ ಹಾಕಿದವು. ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಮಧ್ಯಾಹ್ನ 3.45ಕ್ಕೆ ಧನಂಜಯನಿಗೆ ಗಾದಿ ಹಾಗೂ ನಮ್ದಾ ಅಳವಡಿಸಲಾಯಿತು. ಬಳಿಕ ಅಂಬಾರಿ ಕಟ್ಟುವ ಸ್ಥಳಕ್ಕೆ ಕರೆತಂದು 3.55ರಿಂದ 4.30ರವರೆಗೆ ಅಂಬಾರಿ ಕಟ್ಟುವ ಕಾರ್ಯ ನಡೆಯಿತು.

ಅಂಬಾರಿ ಕಟ್ಟಿದ ಬಳಿಕ ಸಂಜೆ 4.45ಕ್ಕೆ ಅರಮನೆಯ ಬಲರಾಮ ದ್ವಾರದಿಂದ ಗಜಪಡೆ ಹೊರಟಿತು. ಕೆ.ಆರ್. ವೃತ್ತ, ಸಯ್ಯಜಿರಾವ್ ರಸ್ತೆ, ನೆಲ್ಸನ್ ಮಂಡೇಲ ರಸ್ತೆ ಮೂಲಕ ಸಾಗಿದ ಗಜಪಡೆ ಸಂಜೆ 6ರ ವೇಳೆಗೆ ಬನ್ನಿಮಂಟಪ ತಲುಪಿತು.

ವೇಗದ ಹೆಜ್ಜೆಗೆ ಮೆಚ್ಚುಗೆ: ಮರದ ಅಂಬಾರಿ ಹೊತ್ತ ಆನೆಗಳು ಸಾಮಾನ್ಯವಾಗಿ ಅರಮನೆಯಿಂದ ಬನ್ನಿಮಂಟಪ ತಲುಪಲು ಸುಮಾರು ಎರಡು ಗಂಟೆ ತೆಗೆದುಕೊಳ್ಳುತ್ತವೆ. ಆದರೆ ಧನಂಜಯ ಕೇವಲ ಒಂದೂವರೆ ಗಂಟೆಯಲ್ಲಿ ನಿಗದಿತ ಸ್ಥಳ ತಲುಪಿದ್ದು, ಅಂಬಾರಿ ಹೊರುವ ತಾಲೀಮಿನಲ್ಲಿ ತನ್ನ ಸಾಮರ್ಥ್ಯ ತೋರಿಸಿತು.

ವದಂತಿಗಳಿಗೆ ಧನಂಜಯನ ಉತ್ತರ:

ಆರೋಗ್ಯದಲ್ಲಿ ಬದಲಾವಣೆ ಕಂಡುಬಂದಿದ್ದರಿಂದ ಧನಂಜಯ ಒಂದು ದಿನ ತಾಲೀಮಿನಿಂದ ದೂರ ಉಳಿದಿತ್ತು. ಇದನ್ನು ಆಧರಿಸಿ ಧನಂಜಯನಿಗೆ ಮದವೇರಿದೆ ಎಂಬ ವದಂತಿಗಳು ಹರಡಿದ್ದವು. ಗುರುವಾರ ಅಂಬಾರಿ ಹೊತ್ತು ಯಶಸ್ವಿಯಾಗಿ ತಾಲೀಮು ನಡೆಸಿದ ಧನಂಜಯ, ವದಂತಿಗಳಿಗೆ ಅವಕಾಶವಿಲ್ಲ ಎಂಬುದನ್ನು ತನ್ನ ನಡಿಗೆಯ ಮೂಲಕವೇ ತೋರಿಸಿತು.

ಅಶ್ವಪಡೆಯ ತಾಲೀಮು:

ಜಂಬೂ ಸವಾರಿಯ ಮೆರವಣಿಗೆಯಲ್ಲಿ ಗಜಪಡೆಯ ಜತೆಗೆ ಪೊಲೀಸ್ ಇಲಾಖೆಯ ಅಶ್ವಪಡೆಯೂ ಭಾಗವಹಿಸಲಿದೆ. ಈ ಹಿನ್ನೆಲೆಯಲ್ಲಿ ಕುದುರೆಗಳನ್ನೂ ಮೆರವಣಿಗೆಗೆ ಹೊಂದಿಕೊಳ್ಳುವಂತೆ ಸಜ್ಜುಗೊಳಿಸಲಾಗುತ್ತದೆ. ಗುರುವಾರ ನಡೆದ ತಾಲೀಮಿನಲ್ಲಿ 10ಕ್ಕೂ ಹೆಚ್ಚು ಅಶ್ವಗಳು ಮೊದಲ ಬಾರಿಗೆ ಗಜಪಡೆಯೊಂದಿಗೆ ಹೆಜ್ಜೆ ಹಾಕಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net