ಸಾಮರ್ಥ್ಯ, ಕೌಶಲ್ಯ ರೂಢಿಸಿಕೊಳ್ಳಿ

Develop abilities and skills
ವಿಜಯಪುರದ ರಾಜ್ಯ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡ ಟೆಲಿವಿಷನ್ ಸ್ಟುಡಿಯೋ ಭೇಟಿ ಮತ್ತು ಟೆಲಿವಿಷನ್ ಕಾರ್ಯಕ್ರಮ ನಿರೂಪಣೆ ತರಬೇತಿ ಕಾರ್ಯಕ್ರಮವನ್ನು ಪ್ರೊ. ಓಂಕಾರ ಕಾಕಡೆ ಉದ್ಘಾಟಿಸಿದರು. ಸಂದೀಪ ನಾಯಕ್, ಸುಷ್ಮಾ ಪವಾರ ಇತರರಿದ್ದಾರೆ.
Published on

ವಿಜಯಪುರ: ತ್ವರಿತವಾಗಿ ಕೆಲಸ ಸಿಗುವ ಕ್ಷೇತ್ರ ಈಗ ಮಾಧ್ಯಮ ಕ್ಷೇತ್ರ. ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿದ್ದು, ಮಾಧ್ಯಮ ಕೌಶಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ನೀವು ಸುಲಭವಾಗಿ ವೃತ್ತಿ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಹೇಳಿದರು.

ನಗರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಗುರುವಾರ ಹಮ್ಮಿಕೊಂಡ ಟೆಲಿವಿಷನ್ ಸ್ಟುಡಿಯೋ ಭೇಟಿ ಮತ್ತು ಟೆಲಿವಿಷನ್ ಕಾರ್ಯಕ್ರಮ ನಿರೂಪಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಬಗೆಯ ಕೌಶಲ್ಯ ರೂಢಿಸಿಕೊಳ್ಳಬೇಕು. ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯದಿಂದಲೇ ಉತ್ತಮ ಟಿವಿ ಆ್ಯಂಕರ್ ಆಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಟಿವಿ ಆ್ಯಂಕರ್ ಆಗಲು ಕೇವಲ ಉತ್ಸಾಹವಷ್ಟೇ ಸಾಲದು, ಸರಿಯಾದ ತರಬೇತಿ, ಶುದ್ಧ ಮತ್ತು ಸ್ಪಷ್ಟ ಭಾಷೆ, ಆತ್ಮವಿಶ್ವಾಸ ಮತ್ತು ಅಚ್ಚುಕಟ್ಟಾದ ಕೌಶಲ್ಯಗಳ ಅಗತ್ಯವಿದೆ. ಈ ತರಹದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳು ನಿಜವಾಗಿಯೂ ಮಹತ್ವದ ಸಾಧನೆಗೆ ನೆರವಾಗುತ್ತವೆ ಎಂದರು.

ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಟೆಲಿವಿಷನ್ ಮಾಧ್ಯಮದಲ್ಲಿ ಸುದ್ದಿ ಓದುವ ಕಲೆಯ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ಜಿಲ್ಲೆ ವ್ಯಾಪ್ತಿಯ ಹಲವು ಪ.ಪೂ. ಕಾಲೇಜಿನ ಎ., ಬಿಕಾಂ, ಬಿಎಸ್‌ಸಿ, ಬಿಸಿಎ, ಬಿಬಿಎಂ ಮುಂತಾದ ಕೋರ್ಸಿನ ವಿದ್ಯಾರ್ಥಿನಿಯರು, ಶಿಕ್ಷಕರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ಸಂಶೋಧನಾ ವಿದ್ಯಾರ್ಥಿನಿಯರು ಮತ್ತಿತರರಿದ್ದರು.

ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ್ ಸ್ವಾಗತಿಸಿದರು. ಸುಷ್ಮಾ ಪವಾರ ನಿರೂಪಿಸಿದರು. ಫಿಲೋಮಿನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net