

ದೇವದುರ್ಗ: ರಾಯಚೂರಿಗೆ ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಯಚೂರು ಏಮ್ಸ್ ಹೋರಾಟ ಸಮಿತಿ ಹಮ್ಮಿಕೊಂಡ ಧರಣಿ ಬೆಂಬಲಿಸಿ ಇಲ್ಲಿನ ಮಿನಿವಿಧಾನಸೌಧ ಮುಂದೆ ದೇವದುರ್ಗ ಏಮ್ಸ್ ಹೋರಾಟ ಸಮಿತಿ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.
ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ರಾಯಚೂರಿಗೆ ಏಮ್ಸ್ ಸಂಸ್ಥೆ ಮಂಜೂರಿಗೆ ಆಗ್ರಹಿಸಿ ಎರಡು ವರ್ಷಗಳಿಂದ ರಾಯಚೂರಿನಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದೆ ಇರುವುದು ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಂಸದ ಜಿ.ಕುಮಾರ್ ನಾಯಕ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನು ಓದಿ: ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರತಿಭಟನೆ
ಸಿಎಂ ಸಿದ್ದರಾಮಯ್ಯ ಕೂಡ ರಾಯಚೂರಿಗೆ ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೂ ಕೇಂದ್ರ ಸರ್ಕಾರ ಹೋರಾಟವನ್ನು ನಿರ್ಲಕ್ಷ್ಯಮಾಡಿ ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.
ಕೂಡಲೇ ಕೇಂದ್ರ ಸರ್ಕಾರ ರಾಯಚೂರಿಗೆ ಏಮ್ಸ್ ಸಂಸ್ಥೆ ಮಂಜೂರು ಮಾಡಬೇಕು. ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಮೋನಪ್ಪ ನಾಯಕ, ಶಿವರಾಜ ಪೂಜಾರಿ, ಶಿವನಗೌಡ ನಾಯಕ, ಗುಂಡೂರಾವ್ ನಾಯಕ, ಚಂದಪ್ಪ ಜಕ್ಲರ್ ಇತರರಿದ್ದರು.